ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ವಿದ್ಯಾರ್ಥಿಗಳಲ್ಲಿ ನೀರು ಕುಡಿಯುವ ಅಭ್ಯಾಸವನ್ನು ಉತ್ತೇಜಿಸಲು ರಾಜ್ಯದಲ್ಲಿ ಶೀಘ್ರದಲ್ಲೇ ‘ವಾಟರ್ ಬೆಲ್’ ಯೋಜನೆ ಜಾರಿಯಾಗಲಿದೆ. ಕೇರಳದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಈ ಮಾದರಿಯನ್ನು ರಾಜ್ಯದ ಶಾಲೆಗಳಲ್ಲೂ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.
ಶಾಲಾ ಅವಧಿಯಲ್ಲಿ ನಿರ್ದಿಷ್ಟ ಸಮಯಕ್ಕೆ ಗಂಟೆ ಬಾರಿಸುವ ಮೂಲಕ ಮಕ್ಕಳಿಗೆ ನೀರು ಕುಡಿಯಲು ನೆನಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:30 ಕ್ಕೆ ವಾಟರ್ ಬೆಲ್ ಬಾರಿಸಲಿದ್ದು, ಈ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳು ನೀರು ಕುಡಿಯಬೇಕಾಗುತ್ತದೆ.
ಕೇರಳದಲ್ಲಿ ಹಲವು ವರ್ಷಗಳಿಂದ ಈ ಯೋಜನೆ ಜಾರಿಯಲ್ಲಿದ್ದು, ಮಕ್ಕಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿದೆ. ಇದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಹಲವು ಹಂತದ ಚರ್ಚೆಗಳು ನಡೆಯುತ್ತಿವೆ.
ಶಿಕ್ಷಣ ಇಲಾಖೆಯ ಪ್ರಕಾರ, ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಹಾಗೂ ದೇಹದ ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.