ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಕುಮಟಾ ಭಾಗದ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮಾತ್ರ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಆದೇಶವನ್ನು ಗಾಳಿಗೆ ತೂರಿದೆ.

ಮಳೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯೊಳಗೆ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಹೀಗಾಗಿ ಎಲ್ಲಾ ಸರಕಾರಿ ಶಾಲೆಗಳ ಮುಖ್ಯಾಧ್ಯಾಪಕರು ತಮ್ಮ ತಮ್ಮ ಶಾಲೆಯ ಪಾಲಕರ ವಾಟ್ಸಾಪ್ ಗ್ರೂಪ್‌ಗಳಲ್ಲಿ ರಜೆಯ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಕುಮಟಾ ಭಾಗದ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮಾತ್ರ, “ನಮ್ಮ ಶಾಲೆ ಮಧ್ಯಾಹ್ನ 3 ಗಂಟೆಯವರೆಗೂ ಇರಲಿದೆ” ಎಂದು ಸಂದೇಶ ಕಳುಹಿಸಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ. ಈ ಕ್ರಮದಿಂದ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಾಲೆಯವರನ್ನು ವಿಚಾರಿಸಿದರೆ, “ಬೆಳಿಗ್ಗೆ 8 ಗಂಟೆಯೊಳಗೆ ಮಧ್ಯಾಹ್ನದ ಊಟ ಸಿದ್ಧವಾಗುತ್ತದೆ. ವಿದ್ಯಾರ್ಥಿಗಳು ಬರದೇ ಇದ್ದರೆ ಅಡುಗೆ ಹಾಳಾಗಲಿದೆ” ಎಂಬ ಕಾರಣವನ್ನು ನೀಡತ್ತಾರೆ. ಇದರಿಂದ ಬೆಳಿಗ್ಗೆ ಅಡಿಗೆ ಮಾಡಿಕೊಂಡು ಮಧ್ಯಾಹ್ನ ತಣ್ಣಗಿನ ಅನ್ನ ಹಾಕುವರೇ? ಎಂಬ ಪ್ರಶ್ನೆಯೂ ಪಾಲಕರಲ್ಲಿ ಎದ್ದಿದೆ. ಪ್ರತಿದಿನ ಪ್ರಾರ್ಥನೆ ವೇಳೆಯಲ್ಲಿ ಹಾಜರಾತಿ ಪರಿಶೀಲನೆಯ ನಂತರವೇ ಅಡುಗೆ ಮಾಡಲಾಗುತ್ತದೆ ಎನ್ನುವವರೂ ಇದ್ದಾರೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಅನೇಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಆದರೆ ಶಾಲೆಗೆ ಹಾಜರಾದ ಮಕ್ಕಳಿಗೆ ಪಾಠಗಳನ್ನು ಮುಂದುವರಿಸಿದ್ದರಿಂದ, ಮನೆಯಲ್ಲಿ ಉಳಿದ ಮಕ್ಕಳಿಗೆ ಕಲಿಕೆಯ ಹಿನ್ನಡೆಯಾಗಲಿದೆ ಎಂಬ ಆತಂಕವನ್ನು ಪಾಲಕರು ವ್ಯಕ್ತಪಡಿಸಿದ್ದಾರೆ.

“ಅತಿಯಾದ ಮಳೆಯಾದಾಗ ಮಾತ್ರ ಶಾಲೆಗಳಿಗೆ ರಜೆ ನೀಡುತ್ತೇವೆ. ಅದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ. ರಜೆ ಘೋಷಣೆ ಮಾಡಿದ್ದರೂ ಶಾಲೆ ನಡೆಸುವುದು ತಪ್ಪು. ಈ ಕುರಿತು ಬಿಇಓ ಅವರಿಗೆ ತಿಳಿಸಲಾಗಿದೆ” ಎಂದು ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಸುದ್ದಿಬಿಂದುಗೆ ಮಾಹಿತಿ ನೀಡಿದ್ದಾರೆ.

ಇದನ್ನ ಓದಿ : :ಭಾರೀ ಮಳೆ ಕರಾವಳಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ