ಸುದ್ದಿಬಿಂದು ಬ್ಯೂರೋ ವರದಿ
Sirsi/ಶಿರಸಿ: ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಭೀಮಣ್ಣ ನಾಯ್ಕ್  ಕೌಂಟರ್ ಕೊಟ್ಟಿದ್ದು,. “ಅನಂತಮೂರ್ತಿ ಅನ್‌ಕಲ್ಚರ್ಡ್ (Uncultured) ರಾಜಕಾರಣಿ ಎಂದು ಹೇಳುವ ಮೂಲಕ ಹೆಗಡೆ ಹೇಳಿಕೆಯನ್ನ ತಳ್ಳಿ ಹಾಕಿದ್ದಾರೆ.

ನಗರದ ಶಾಸಕರ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾಸಕರು, ಶಿರಸಿ ನಗರಸಭೆಯಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಹೀಗೆ ಗುಂಡಿ ಬೀಳುವುದಕ್ಕೆ ಹಿಂದೆ ಅಧಿಕಾರದಲ್ಲಿದ್ದಾಗ ಎಷ್ಟು ಗುಣಮಟ್ಟದ ಕಾಮಗಾರಿ ಮಾಡಿದ್ದೀರಿ ಎಂದು ಪ್ರಶ್ನಿಸಬೇಕಾಗುತ್ತದೆ. ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯು ಕೇಂದ್ರ ಸರ್ಕಾರಕ್ಕೆ ಸೇರಿದೆ. ನಾನೂ ಸಂಸದರ ಮೇಲೆ ಆಕ್ಷೇಪ ಹೇರಬಹುದಿತ್ತು. ಆದರೆ, ರಸ್ತೆಯನ್ನು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮುಚ್ಚಲು ಸಾಧ್ಯವಿಲ್ಲ. ರಸ್ತೆ ನಿರ್ಮಾಣಕ್ಕೆ ಗುತ್ತಿಗೆ ಪಡೆದವರು ಮಾಡಬೇಕು. ಅವರ ಮೇಲೆ ಒತ್ತಡ ಹೇರಬೇಕೇ ಹೊರತೂ ಸಂಸದರನ್ನು ದೂಷಿಸುವುದಲ್ಲ.

ಆರೋಪಿಸುವ ಮೊದಲು ಪೂರ್ವಾಪರ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ ಅವರು, ಶಿರಸಿ ವಿಭಾಗದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 10 ಲಕ್ಷ ಕಿಮೀ ಓಡಿದ ಬಸ್‌ಗಳೇ ಜಾಸ್ತಿ ಎಂದು ನನ್ನ ಮೇಲೆ ಆರೋಪಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಮಗಳಿಗೆ ಹೊಸ ಬಸ್ ನೀಡದ ಕಾರಣದಿಂದ ಹಳೇ ಬಸ್‌ಗಳು ಮಾತ್ರ ಇಂದಿವೆ. ನಮ್ಮ ಸರ್ಕಾರದ ಅವಧಿಯಲ್ಲೇ ಹೊಸ ಬಸ್‌ಗಳನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಇನ್ನೊಂದಿಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗಿವೆ. ಆದರೆ, ಇನ್ನೂ ಆಗಬೇಕಾದ ಕಾರ್ಯಗಳು ಜಾಸ್ತಿ ಇವೆ. ಜಿಲ್ಲೆಯ ಬಡ ಜನತೆಗೆ ಇನ್ನಷ್ಟು ಹೆಚ್ಚಿನ ಆಶ್ರಯ ಮನೆಗಳನ್ನು ಒದಗಿಸಿಕೊಡಬೇಕಿದೆ. ಕೆಲ ಹಳ್ಳಿಗಳಿಗೆ ಸಣ್ಣ ಸಣ್ಣ ಫುಟ್ ಬ್ರಿಜ್ ಮಾದರಿಯ ಸೇತುವೆಗಳನ್ನು ನಿರ್ಮಿಸಿ ಅವರ ಸಂಪರ್ಕಕ್ಕೆ ಆದ್ಯತೆ ನೀಡಬೇಕಿದೆ. ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಈಗಾಗಲೇ ಮಾಡಿಕೊಂಡಿದ್ದು, ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಬಂಡಳ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಶಿರಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಎಸ್.ಕೆ. ಭಾಗ್ರತ್, ಜ್ಯೋತಿ ಪಾಟೀಲ ಮತ್ತಿತರರು ಇದ್ದರು.

ಇದನ್ನೂ ಓದಿ:-ಗುರು ಸೇವೆ ಸಲ್ಲಿಸಿದ ಕುಮಟಾ ನಗರ, ಭಟ್ಕಳ, ಸಾಗರ ನಾಮಧಾರಿ ಕೂಟ