ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಹೋಂ ಸ್ಟೇ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿಯನ್ನೂ ಪಡೆಯದೆ, ಅಕ್ರಮ ಹಾದಿಯಲ್ಲಿ ಹಣ ಮಾಡುವ ಉದ್ದೇಶದಿಂದ ತಾಲೂಕಿನ ಬೈರುಂಬೆಯ ವೈದ್ಯರೊಬ್ಬರು ಹೋಂಸ್ಟೇನಲ್ಲಿ ಅಕ್ರಮ ಚಟುವಟಿಕೆ ನಡೆಸಲು ಅವಕಾಶ ನೀಡಿದ್ದರು, ಇಸ್ಪೀಟ್ ಆಟದಲ್ಲಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅಕ್ರಮ ಹೋಂ ಸ್ಟೇ ಹಾಗೂ ರೇಸಾರ್ಟ್ ಮಾಲೀಕರ ವಿರುದ್ದ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಶಿರಸಿ ತಾಲೂಕಿನ ಬೈರುಂಬೆಯಲ್ಲಿ ಹಾವೇರಿ ಮೂಲದ ಡಾ.ಬಸವರಾಜ್ ವೀರಾಪುರ ಎಂಬುವರಿಗೆ ಸೇರಿದ್ದ ಅಕ್ರಮ ಹೋಂಸ್ಟೇ ಒಂದರ ಮೇಲೆ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ದಾಳಿ ನಡೆಸಿ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯ ಅನೇಕರನ್ನ ವಶಕ್ಕೆ ಪಡೆದಿದ್ದರು, ಈ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕ ಡಾ ಬಸವರಾಜ್ ವಿರಾಪುರ ಸೇರಿದಂತೆ ಹಲವರ ವಿರುದ್ದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಬಳಿಕ ಈ ಹೋಂ ಸ್ಟೇನಲ್ಲಿ ಅಕ್ರಮ ಚಟುವಟಿಕೆ ನಡೆಯುವುದಲ್ಲದೇ ಹೋಂ ಸ್ಟೇ ಕೂಡ ಅಕ್ರಮ ಎನ್ನುವುದು ಗೊತ್ತಾಗಿದೆ…
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಇಂದು ಶಿರಸಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸುದ್ದಿಗೋಷ್ಠಿಯನ್ನ ನಡೆಸಿದ್ದರು.ಈ ವೇಳೆ ಮಾಧ್ಯಮ ವರದಿಗಾರರು ಬೈರುಂಬೆ ಹೋಂ ಸ್ಟೇ ಮೇಲೆ ನಡೆದ ದಾಳಿ ವಿಚಾರವನ್ನ ಪ್ರಸ್ತಾಪಿಸಿದ್ದು, ಇಲ್ಲಿ ಅನೇಕ ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿರುವುದನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಅವರು ಅಕ್ರಮವಾಗಿರುವ ಹೋಂ ಸ್ಟೇ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ,
ಹಾವೇರಿ ವ್ಯಕ್ತಿಯ ಅಕ್ರಮ ಹೋಂ ಸ್ಟೇನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಯಿಂದಾಗಿ ಉತ್ತರಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬರುವಂತಾಗಿರುವುದಷ್ಟೆ ಅಲ್ಲದೆ ಕಾನೂನು ಪ್ರಕಾರವಾಗಿ ಹೋಂ ಸ್ಟೇ ರೆಸಾರ್ಟ್ ಮಾಲೀಕರಿಗೂ ಕೆಟ್ಟ ಹೆಸರು ಬರುವಂತಾಗಿದೆ. ಎಸ್ಪಿ ಅವರು ಹೇಳಿದಂತೆ ಕ್ರಮಕ್ಕೆ ಮುಂದಾದರೆ ಅತೀ ಶೀಘ್ರದಲ್ಲೆ ಬೈರುಂಬೆಯ ವೈದ್ಯನ ಹೋಂ ಸ್ಟೇಗೆ ಬೀಗ ಮುದ್ರೆ ಬಿಳಲಿದೆ..