ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ವಾಸದ ಮನೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದ ಸಿದ್ದಾಪುರ ತಾಲೂಕಿನ ಶಿರಳಗಿ ಪಂಚಾಯತ್ ವ್ಯಾಪ್ತಿಯ ಬಿಕ್ಕಲಸೆ ಗ್ರಾಮದ ರಾಜಶೇಖರ್ ಮಡಿವಾಳ ಅವರ ಮನೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಭೇಟಿ ನೀಡಿ ಧನಸಹಾಯ ಮಾಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇದು ಒಂದು ದುರದೃಷ್ಟಕರ ಘಟನೆ. ಮನೆಯ ದಿನನಿತ್ಯದ ಉಪಯೋಗದ ಪಾತ್ರೆ, ಬಟ್ಟೆ ಎಲ್ಲವೂ ಸುಟ್ಟು ಹೋಗಿರುವುದು ನಿಜಕ್ಕೂ ದುಃಖದ ಸಂಗತಿ. ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ್ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ ವೈಯಕ್ತಿಕ ಪರಿಹಾರ ನೀಡಿರುವುದು ಸಂತೋಷದ ವಿಷಯ.ಆದರೆ ಶಾಸಕರಾಗಿ ಅವರು ಸಂಪೂರ್ಣ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಒದಗಿಸಬೇಕು. ಕೂಡಲೇ ಮುಖ್ಯಮಂತ್ರಿ ಅವರಿಗೆ ಈ ವಿಷಯ ತಿಳಿಸಿ ಕನಿಷ್ಟ 5 ಲಕ್ಷ ರೂ. ಮುಖ್ಯಮಂತ್ರಿ ವಿಶೇಷ ಪರಿಹಾರ ನೀಡಿಸುವಂತೆ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸಿದ್ದಾಪುರ ತಾಲೂಕಾಧ್ಯಕ್ಷ ಎಂ.ಕೆ. ತಿಮ್ಮಪ್ಪ ಸೇರಿದಂತೆ ಬಿಜೆಪಿಯ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.