ಸುದ್ದಿಬಿಂದು ಬ್ಯೂರೋ ವರದಿ,
ಶಿರಸಿ: ಉತ್ತರ ಕನ್ನಡದ ಶಿರಸಿಯ ನಿಲೇಕಣಿ ರಸ್ತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗತ್ತಿದೆ “ಸಿಂಗಾಪುರ ರಸ್ತೆಯ” ಹೆಸರಿನಲ್ಲಿ ರಾಜ್ಯಮಟ್ಟದಲ್ಲೇ ಗಮನ ಸೆಳೆಯುತ್ತಿದೆ.
ಈ ರಸ್ತೆಯು ಅಷ್ಟೊಂದು ಸುಂದರವೋ, ಅಲಂಕೃತವೋ, ಸುಗಮವೋ ಅನ್ನೋದಿಲ್ಲ. ಬದಲಿಗೆ ಇತ್ತೀಚಿನ ವರ್ಷಗಳಲ್ಲಿ ಬಹುಮಾನಗಳಿಗಾಗಿ ಅರ್ಜಿ ಹಾಕಬಹುದಾದಂತಹ ‘ಅತ್ಯಂತ ಹದಗೆಟ್ಟ ರಸ್ತೆ’ ಎಂಬ ಹೆಗ್ಗಳಿಕೆಗೆ ಅರ್ಹತೆ ಹೊಂದಿದೆ!
“ಇದು ನಿಜಕ್ಕೂ ಸಿಂಗಾಪುರ ರಸ್ತೆ – ಯಾಕಂದ್ರೆ ಇಲ್ಲಿ ಕಾರು ಓಡೋದಿಲ್ಲ, ಹಾರ್ತದೆ!”
ಹಗಲಾದರೂ ರಾತ್ರಿ ನೋಡಿದಂತಾಗುತ್ತದೆ, ಏಕೆಂದರೆ ಒಂದೊಂದು ಹೊಂಡಗಳು ಚಂದ್ರಗುಹೆಗಳಂತೆ ಬಿತ್ತು ಹೋಗಿವೆ. ಮಳೆಬಿದ್ದರೆ ಈ ರಸ್ತೆಯು ‘ಮಿನಿ ಸರೋವರ’ ಆಗಿ ಪರಿವರ್ತನೆಯಾಗುತ್ತದೆ. ಬೈಕ್ ಸವಾರರು ಈ ಹೊಂಡದ ಪ್ರವಾಹದಲ್ಲೇ ಸ್ಕೂಬಾ ಡೈವಿಂಗ್ ತರಬೇತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.! ಈ ಮಾರ್ಗದಲ್ಲಿ ವಾಹನ ಓಡಿಸುತ್ತಿರುವವರು, ಅಷ್ಟೆ ಡ್ರೈವಿಂಗ್ ಕೌಶಲ್ಯವನ್ನ ಹೊಂದಿರಬೇಕಿದೆ. .
“ಇದು ರಸ್ತೆಯಲ್ಲ; ಒಂದು ಟ್ರೈನಿಂಗ್ ಜಿಮ್!” ಎಂಬ ವ್ಯಂಗ್ಯವಾಕ್ಯಗಳೊಂದಿಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ವೈರಲ್ ಮಾಡತ್ತಿದ್ದಾರೆ. ಇದು ಇಲ್ಲಿನ ಜನರ ನಿತ್ಯದ ದುಃಖದ ಕಥೆ. ಶಾಲಾ ವಿದ್ಯಾರ್ಥಿಗಳು ಹಿಡಿದು, ಹಿರಿಯ ನಾಗರಿಕರ ತನಕ ಎಲ್ಲರಿಗೂ ಈ ರಸ್ತೆ ನಿತ್ಯದ ಸಂಕಟಕ್ಕೆ ಕಾರಣವಾಗಿದೆ.