ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ :  ಉತ್ತರ ಕನ್ನಡ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟವರು, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದವರು ಹಾಗೂ ಓಸಿ ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಕಾರವಾರ ತಾಲೂಕಿನ ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಾಳಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದ ಪರಶುರಾಮ ಮಹಾಬಳೇಶ್ವರ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಿನ್ನೆ ನಡೆದ ದಾಳಿಯಲ್ಲಿ ಆರೋಪಿತನನ್ನು ಮದ್ಯ ಸೇವನೆಗೆ ವ್ಯವಸ್ಥೆ ಮಾಡುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅಮದಳ್ಳಿ ಗ್ರಾಮದ ಕಂತ್ರಿವಾಡ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಮದ್ಯದ ಖಾಲಿ ಪೌಚ್‌ಗಳು, ಗ್ಲಾಸ್ ಹಾಗೂ ನೀರಿನ ಬಾಟಲಿ ಪತ್ತೆಯಾಗಿವೆ. ಇನ್ನೊಂದು ಪ್ರಕರಣದಲ್ಲಿ ಶಿರವಾಡದ ಬಂಗಾರಪ್ಪ ನಗರದ ಮನೆಯ ಪಕ್ಕದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಕಾರವಾರ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್‌ಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋಕರ್ಣದಲ್ಲೂ ಅಕ್ರಮ ಮದ್ಯ ಸೇವನೆಗೆ ಅವಕಾಶ

ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾವಳಿ ಗ್ರಾಮದ ಗೋಕರ್ಣ ರಸ್ತೆಯಲ್ಲಿರುವ ಎಸ್.ಎಸ್. ಫಾಸ್ಟ್ ಫುಡ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಮದ್ಯದ ಟೆಟ್ರಾ ಪ್ಯಾಕೆಟ್‌ಗಳು ಹಾಗೂ ಖಾಲಿ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮದ್ಯದ ಮೌಲ್ಯ ಅಂದಾಜು 210 ರೂ. ಎಂದು ತಿಳಿದುಬಂದಿದೆ.

ಮುಂಡಗೋಡದಲ್ಲಿ ಓಸಿ ಜೂಜಾಟ ಅಡ್ಡೆ ಮೇಲೆ ದಾಳಿ 

ಮುಂಡಗೋಡ ತಾಲೂಕಿನ ಕೆಂದಲಗೇರಿ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಓಸಿ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ಓಸಿ ಚೀಟಿ ಬರೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 510 ರೂ. ನಗದು, ಒಂದು ಪೆನ್ನು ಹಾಗೂ ಓಸಿ ಅಂಕೆ ಬರೆದ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ/ಬಸ್ ಪ್ರಯಾಣ ದರ ಹೆಚ್ಚಳ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊರೆ: ರೂಪಾಲಿ ಎಸ್. ನಾಯ್ಕ ಖಂಡನೆ