
ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಅಂಕೋಲಾದಿಂದ ಯಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ದುಸ್ಥಿತಿ ಇದೀಗ ವಾಹನ ಸವಾರರ ಪಾಲಿಗೆ ನಿತ್ಯ ನರಕಯಾತನೆಯಾಗಿದೆ. ಹೆಜ್ಜೆಹೆಜ್ಜೆಗೂ ಬೃಹತ್ ಗಾತ್ರದ ಹೊಂಡಗಳು, ಕಿತ್ತುಹೋಗಿರುವ ರಸ್ತೆಯ ಮೇಲ್ಮೈ, ಹದಗೆಟ್ಟ ಸಂಚಾರ ವ್ಯವಸ್ಥೆ ! ಇದು ಹೆದ್ದಾರಿಯೋ ಅಥವಾ ಯಮಲೋಕಕ್ಕೆ ಕರೆದೊಯ್ಯುವ ಮೃತ್ಯುಪಥವೋ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಈ ಹೆದ್ದಾರಿಯಲ್ಲಿ ಪ್ರಯಾಣಿಸಬೇಕೆಂದರೆ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ರಸ್ತೆಯುದ್ದಕ್ಕೂ ಕಾಣಿಸಿಕೊಳ್ಳುವ ಹೊಂಡಗಳು ವಾಹನ ಚಾಲಕರಿಗೆ ಸವಾಲಾಗಿ ಪರಿಣಮಿಸಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ. ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು ಹಾಗೂ ಭಾರೀ ವಾಹನಗಳ ಚಾಲಕರು ಪ್ರತಿದಿನವೂ ಸಂಕಷ್ಟ ಅನುಭವಿಸುವಂತಾಗಿದೆ.
ತೆರಿಗೆ ವಸೂಲಿಗೆ ಮಾತ್ರವೇ ಇಲಾಖೆ ಸೀಮಿತವೇ..?
ವಾಹನ ಸವಾರರಿಂದ ವಿವಿಧ ರೂಪಗಳಲ್ಲಿ ತೆರಿಗೆ ಹಾಗೂ ಶುಲ್ಕಗಳನ್ನು ವಸೂಲಿ ಮಾಡುವ ಸಂಬಂಧಪಟ್ಟ ಇಲಾಖೆ, ರಸ್ತೆ ನಿರ್ವಹಣೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ವಾಹನ ಸವಾರರು ತೆರಿಗೆ ಪಾವತಿಸುವುದು ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ಜೀವಭಯದಿಂದ ಸಂಚರಿಸುವುದಕ್ಕಾಗಿಯೇ ? ಅಥವಾ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ತೆರಿಗೆ ಕಟ್ಟುತ್ತಿದ್ದಾರೆಯೇ?
ಹೆದ್ದಾರಿಯ ದುಸ್ಥಿತಿಗೆ ಹೊಣೆ ಹೊರುವವರು ಯಾರು ಎಂಬುವಂತಾಗಿದೆ. ರಸ್ತೆ ನಿರ್ವಹಣೆಗೆ ಜವಾಬ್ದಾರರಾಗಿರುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ.? ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಎಲ್ಲಿದ್ದಾರೆ? ಚುನಾವಣೆ ಸಂದರ್ಭದಲ್ಲಿ ಜನರ ಮನೆಬಾಗಿಲಿಗೆ ಬರುವ ನಾಯಕರು, ಜನರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಈ ರಸ್ತೆಯ ಸಮಸ್ಯೆ ಬಗೆಹರಿಸಲು ಯಾಕೆ ಮುಂದಾಗುತ್ತಿಲ್ಲ ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ವಾಹನಗಳ ಹಾನಿ, ಅಪಘಾತದ ಭೀತಿ; ಜನರ ಗೋಳು ಕೇಳುವವರಿಲ್ಲ!
ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆಯ ದುಸ್ಥಿತಿಯಿಂದಾಗಿ ವಾಹನಗಳು ಅಲ್ಲಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಉಂಟಾಗುತ್ತಿದೆ. ರಸ್ತೆ ಹದಗೆಟ್ಟಿರುವುದರಿಂದ ಪ್ರಯಾಣದ ಸಮಯ ಹೆಚ್ಚುವುದರ ಜೊತೆಗೆ ಪ್ರಯಾಣಿಕರ ನೆಮ್ಮದಿಯೂ ಹಾಳಾಗುವಂತಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಚರಿಸುವ ವಾಹನಗಳಿಗೂ ಈ ಮಾರ್ಗದ ದುಸ್ಥಿತಿ ಅಡ್ಡಿಯಾಗುವ ಆತಂಕವಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಅಪಘಾತದ ಬಳಿಕ ಎಚ್ಚೆತ್ತುಕೊಳ್ಳುವರೇ?
ಜನರ ಜೀವಕ್ಕೆ ಬೆಲೆ ಇಲ್ಲವೇ..? ದೊಡ್ಡ ಅನಾಹುತ ಸಂಭವಿಸಿದ ಬಳಿಕವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕೇ..? ಹೊಂಡಗಳಿಂದ ತುಂಬಿದ ರಸ್ತೆಯನ್ನು ದುರಸ್ತಿಗೊಳಿಸಲು ಇನ್ನೆಷ್ಟು ದಿನ ಕಾಯಬೇಕು? ಅಂಕೋಲಾ–ಯಲ್ಲಾಪುರ ಹೆದ್ದಾರಿಯನ್ನು ತಕ್ಷಣ ಪರಿಶೀಲಿಸಿ, ಅಪಾಯಕಾರಿ ಹೊಂಡಗಳನ್ನು ಮುಚ್ಚಿ, ಗುಣಮಟ್ಟದ ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

