ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ಅಮಾಯಕ ಯುವತಿ ರಂಜಿತಾ ಬನಸೋಡೆ ಅವರ ಭೀಕರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರದ ಇತಿಹಾಸದಲ್ಲೇ ಇಂತಹ ಕ್ರೂರ ಘಟನೆ ಕಂಡುಬಂದಿಲ್ಲ ಘಟನೆ ನಡೆದ ತಕ್ಷಣವೇ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಶಾಸಕ ಶಿವರಾಮ ಹೆಬ್ಬಾರ್ ಅವರು. ಈ ಸಭೆಯಲ್ಲಿ ಆರೋಪಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸದೆ ಶೀಘ್ರ ಬಂಧಿಸಿ, ಕಾನೂನಿನಡಿ ಕಠಿಣ ಹಾಗೂ ಮಾದರಿ ಶಿಕ್ಷೆ ವಿಧಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ಇಂತಹ ಕ್ರೂರ ಕೃತ್ಯ ಎಸಗಿದವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.ಯಾವುದೇ ರಾಜಿ, ವಿಳಂಬ ಅಥವಾ ಸಡಿಲಿಕೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು. ಕಾನೂನು ಕೈಗೊಳ್ಳುವ ಕ್ರಮದಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಅಲ್ಲದೆ, ಮೃತ ರಂಜಿತಾ ಬನಸೋಡೆ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಾಪುರದ ಸಾರ್ವಜನಿಕರು ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ಪೊಲೀಸ್ ಇಲಾಖೆ ಈಗಾಗಲೇ ಆರೋಪಿಯನ್ನು ಬಂಧಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಇದನ್ನೂ ಓದಿ/ಪ್ರಿಯಕರನ ಕೈಯಲ್ಲಿ ಜೀವ ಕಳೆದುಕೊಂಡ ರಂಜಿತಾ : ಕಾಳಮ್ಮನಗರದಲ್ಲಿ ಹಾಡುಹಗಲೇ ಭೀಕರ ಕೊಲೆ


