ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ ; “ನಮ್ಮ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ಭೂಮಿ ನೀಡುವ ಕಾನೂನು ತಂದಿತ್ತು. ಇಲ್ಲಿ ರೈತರು ಭೂಮಿಗಾಗಿ ಅರ್ಜಿ ಹಾಕಿದ್ದಾರೆ. ಅರಣ್ಯ ಭೂಮಿಗಳಲ್ಲಿ ವ್ಯವಸಾಯ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಡಿಎಫ್ ಓಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೂಚಿಸಿದ್ದಾರೆ.
ಕರಾವಳಿ ಉತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ವೇಳೆ ಸುಸ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ್ದರು.”ಪಂಚಾಯತಿ ಮಟ್ಟದಲ್ಲಿಯೇ ಇದರ ಬಗ್ಗೆ ರೆಸಲ್ಯೂಷನ್ ಹೊರಡಿಸಿ ಮೂರು ತಲೆಮಾರಿನಿಂದ ಇದ್ದಾರೆ ಎಂದು ಪ್ರಮಾಣ ಪತ್ರ ನೀಡಿದರೆ ಇದಕ್ಕಿಂತ ದೊಡ್ಡದಾದ ದಾಖಲೆ ಮತ್ತೊಂದಿಲ್ಲ. ಯಾರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಭೀಮಣ್ಣ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯ ಅವರು ಸೇರಿದಂತೆ ಎಲ್ಲಾ ಶಾಸಕರು ಗಮನ ಸೆಳೆದಿದ್ದಾರೆ” ಎಂದರು.
“ಮೂರು ಎಕರೆ ಒಳಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬದುಕುತ್ತಿರುವ ಬಡವರು, ರೈತರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಇದು ನಮ್ಮ ಪಕ್ಷ ಜಾರಿಗೆ ತಂದ ಕಾನೂನು ಅದಕ್ಕೆ ನಮಗೆ ಇದರ ಬಗ್ಗೆ ಬದ್ದತೆ ಇದೆ. ಬುಡಕಟ್ಟು ಸಮುದಾಯಗಳಿಗೆ 25 ವರ್ಷ, ಇತರೇ ಸಮುದಾಯದವರಿಗೆ 75 ವರ್ಷ ಅವಕಾಶವಿದೆ” ಎಂದರು.
ನದಿ ಜೋಡಣೆ ವಿಚಾರವಾಗಿ ಮಾತನಾಡಿದ ಅವರು, “ಬೇಡ್ತಿ ಮತ್ತು ವರದಾ ನದಿ ಜೋಡಣೆ ವಿಚಾರವಾಗಿ ಈಗಾಗಲೇ ಡಿಪಿಆರ್ ತಯಾರು ಮಾಡಲು ಅನುಮತಿ ನೀಡಿ ಸಹಿ ಕೂಡ ಮಾಡಿದ್ದೇವೆ. ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಬದ್ದವಾಗಿದ್ದೇವೆ. ಕೇಂದ್ರ ಸರ್ಕಾರ ಶೇ.90, ರಾಜ್ಯ ಸರ್ಕಾರ ಶೇ.10 ರಷ್ಟು ಅನುದಾನ ನೀಡಲಿದೆ” ಎಂದರು.
ಸ್ಥಳೀಯ ಶಾಸಕರ ವಿರೋಧದ ಬಗ್ಗೆ ಕೇಳಿದಾಗ, “ಯಾರು ಏನೇ ವಿರೋಧ ಮಾಡುತ್ತಾರೋ ಬಿಡುತ್ತಾರೋ ಮುಖ್ಯವಲ್ಲ. ನಮ್ಮ ಜನರಿಗೆ, ರೈತರಿಗೆ ಇದರಿಂದ ಅನುಕೂಲವಾಗುವುದು ಮುಖ್ಯ. ಅಂತರ್ಜಲ ಹೆಚ್ಚಾಗಬೇಕು. ಯಾವುದೇ ಒಳ್ಳೆ ಕೆಲಸ ಆಗುವಾಗ ವಿರೋಧ ವ್ಯಕ್ತ ಮಾಡುತ್ತಾರೆ. ಸಂತ್ರಸ್ತರಿಗೆ ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು” ಎಂದರು.
“ರಸ್ತೆ ಅಗಲ ಮಾಡಿದರು, ಕಾರ್ಖಾನೆ ತಂದರು, ಸೇತುವೆ ನಿರ್ಮಾಣ ಮಾಡಿದರೂ ವಿರೋಧ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಗೂ ವಿರೋಧ ಮಾಡುತ್ತಿದ್ದರು. ಈಗ ಗ್ಯಾರಂಟಿಗಳನ್ನು ತೆಗೆದುಕೊಳ್ಳುತ್ತಿಲ್ಲವೇ? ವಿರೋಧ ಮಾಡುತ್ತಿದ್ದ ಪಕ್ಷದವರು ಗ್ಯಾರಂಟಿಗಳನ್ನು ವಾಪಸ್ ನೀಡಲಿ” ಎಂದರು.
ನೀವು ಉದ್ಘಾಟನೆ ಮಾಡುವವರೆಗೆ ನೂತನ ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡುವ ಬಗ್ಗೆ ಕೇಳಿದಾಗ, “ಗಂಗಾವತಿ ಮತ್ತು ಗೋಕರ್ಣ ಸೇತುವೆಯನ್ನು ಮತ್ತೊಂದು ದಿನ ಬಂದು ಉದ್ಘಾಟಿಸಲಾಗುವುದು. ಇದರ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ. 45 ವರ್ಷವೇ ಕಾದಿದ್ದೀರಂತೆ ಸ್ವಲ್ಪ ದಿನ ಕಾಯಿರಿ. ಇಡೀ ಜಿಲ್ಲೆಯಲ್ಲಿ ಐದು ಮಂದಿ ಶಾಸಕರು ಒಟ್ಟಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶಿವರಾಂ ಹೆಬ್ಬಾರ್ ಅವರು ಸೇರಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಜಿಲ್ಲೆಯಿಂದ ರಾಜ್ಯಕ್ಕೆ ಶಕ್ತಿಯನ್ನು ಈ ಜನತೆ ನೀಡಿದ್ದಾರೆ” ಎಂದರು.
ಜನವರಿ ನಂತರ ನೀವು ಮುಖ್ಯಮಂತ್ರಿ ಆಗುವಿರಾ ಎಂದಾಗ, “ನಾವು ನಿಮ್ಮ ಬಳಿ ಹೇಳಿದ್ದೇವಾ? ನೀವುಗಳೇ ಸೃಷ್ಟಿ ಮಾಡುತ್ತಿರುವ ವಿಚಾರ” ಎಂದರು. ನಾಲ್ಕೈದು ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆ ಆಗದ ಬಗ್ಗೆ ಆರ್.ವಿ.ದೇಶಪಾಂಡೆ ಅವರು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಆರ್.ವಿ.ದೇಶಪಾಂಡೆ ಅವರು ಹಿರಿಯರಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಯವರು ಹಾಗೂ ಅವರ ಬಳಿ ನೀವೆ ಮಾತನಾಡಿದರೆ ಒಳ್ಳೆಯದು” ಎಂದರು.


