ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕರಾವಳಿ ಉತ್ಸವಕ್ಕೆ ಆಗಮಿಸುವ ಗಣ್ಯರಿಗಾಗಿ ಜಿಲ್ಲಾಡಳಿತ ವಿಐಪಿ ಪಾಸುಗಳನ್ನು ವಿತರಿಸಿದ್ದು, ಅದೇ ಪಾಸುಗಳೇ ಇದೀಗ ತಲೆನೋವಾಗಿವೆ. ಗಣ್ಯರ ಸಾಲಿನಲ್ಲಿ ಆಸನ ಪಡೆಯಲು ಕೆಲವರು ನಕಲಿ ಪಾಸ್ ಮೊರೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಮೂಲ ಪಾಸುಗಳನ್ನು ಕಲರ್ ಜೆರಾಕ್ಸ್ ಮಾಡಿಸಿ ವಿಐಪಿ ಪ್ರವೇಶ ದ್ವಾರದಿಂದ ಒಳನುಗ್ಗುವ ಪ್ರಯತ್ನಗಳು ಹೆಚ್ಚಾಗಿವೆ.

ದಿನದಿಂದ ದಿನಕ್ಕೆ ಕರಾವಳಿ ಉತ್ಸವದ ಸಂಭ್ರಮ ಹೆಚ್ಚುತ್ತಿದ್ದು, ಸ್ಥಳೀಯ ಕಲಾವಿದರ ಜೊತೆಗೆ ರಾಷ್ಟ್ರಮಟ್ಟದ ಖ್ಯಾತ ಕಲಾವಿದರು ವೇದಿಕೆಗೆ ಆಗಮಿಸಿ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದ್ದಾರೆ. ಸುಮಾರು 12 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದರೂ, ಜನಸಂದಣಿ ನಿರೀಕ್ಷೆಗೂ ಮೀರುತ್ತಿದೆ. ಅನೇಕರು ನಿಂತುಕೊಂಡೇ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದು, ವೇದಿಕೆ ಸಮೀಪ ಸೇರುವ ಉದ್ದೇಶದಿಂದ ಕೆಲವರು ಅಡ್ಡಮಾರ್ಗಗಳನ್ನು ಹಿಡಿಯುತ್ತಿರುವುದು ಕಂಡುಬರುತ್ತಿದೆ.

ಗಣ್ಯರು ಹಾಗೂ ಅತಿಗಣ್ಯರಿಗಾಗಿ ಮೀಸಲಿಟ್ಟ ಆಸನಗಳಲ್ಲಿ ರಾಜಕೀಯ ಪಕ್ಷದ ಕೆಲ ಕಾರ್ಯಕರ್ತರು ಆಸೀನರಾಗಿರುವ ಆರೋಪಗಳು ಕೇಳಿಬರುತ್ತಿವೆ. ಇತ್ತ, ಹೂವು–ಹಣ್ಣು, ತರಕಾರಿ ವ್ಯಾಪಾರಿಗಳ ಬಳಿಯೂ ಗಣ್ಯರ ಪಾಸುಗಳು ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ವಾಸ್ತವದಲ್ಲಿ ವಿತರಿಸಿದ ಸಂಖ್ಯೆಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಪಾಸುಗಳು ವೇದಿಕೆ ಭಾಗಕ್ಕೆ ಬರುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ರಾತ್ರಿ ವೇಳೆ ಏಕಾಏಕಿ ಜನಸಂದಣಿ ಹೆಚ್ಚಾಗುವುದರಿಂದ ಪಾಸುಗಳನ್ನು ಸಮಗ್ರವಾಗಿ ಪರಿಶೀಲಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ನಕಲಿ ಪಾಸು ಹೊಂದಿದವರನ್ನು ಹೊರಕ್ಕೆ ಕಳುಹಿಸಲು ಮುಂದಾದಾಗ, ವೇದಿಕೆಯ ಮುಂದೆಯೇ ವಾಗ್ವಾದ ನಡೆದ ಸಂದರ್ಭಗಳೂ ಎದುರಾಗಿವೆ. ಈ ಹಿನ್ನೆಲೆಯಲ್ಲಿ ನಕಲಿ ಪಾಸುಗಳ ಹಾವಳಿ ತಡೆಗಟ್ಟಲು ಜಿಲ್ಲಾಡಳಿತ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಕುರಿತು ಸಿದ್ಧತೆ ನಡೆಸುತ್ತಿದೆ.

ಸೀಲ್ ಕೂಡ ನಕಲಿ..!
ಜಿಲ್ಲಾಡಳಿತದಿಂದ ನೀಡಲಾಗಿರುವ ಪಾಸ್ ಹಿಂಬಂದಿಗೆ ಆಯಾ ಇಲಾಖೆಯ ಸರಕಾರಿ ಸೀಲ್ ಹಾಕಲಾಗಿದೆ. ಕಲರ್ ಪಾಸ್ ಝೇರಾಕ್ಸ್ ಮಾಡುವುದು ಅಷ್ಟೊಂದು ಕಷ್ಟಕರವೇನಲ್ಲ.‌ಆದರೆ ಒಂದು ಹೆಜ್ಜೆ‌ಮುಂದುವರೆದ ನಕಲಿ ಪಾಸ್ ತಯಾರಕರು ಸರಕಾರಿ ಸೀಲ್‌ಗಳನ್ನು ಸಹ  ನಕಲಿ ಮಾಡಿರುವುದು ಆತಂಕಕಾರಿ ವಿಚಾರ..ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕಿರುವುದೆ. ಇಲ್ಲದೆ ಹೋದರೆ ಮುಂದಿನ ಪ್ರತಿಯೊಂದು ವಿಚಾರದಲ್ಲಿ ನಕಲಿ ಸೀಲ್ ತಯಾರಿಸಿ ಇನ್ನಷ್ಟು ಅವ್ಯವಹಾರಕ್ಕೂ ಕೈ ಹಾಕಿದರೆ ಅಚ್ಚರಿ ಪಡಬೇಕಿಲ್ಲ..ಇದು ಅತೀ ದೊಡ್ಡ ಕ್ರಿಮಿನಲ್ ಪ್ರಕರಣ ಎಂದು ಕಾನೂನು ತಜ್ಞನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ