ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗವು ಕಳೆದ 11 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ಅದೇ ರೀತಿ ಈ ವರ್ಷ ಡಿಸೆಂಬರ್  21ರಂದು ಕುಮಟಾದ ಗ್ರಾಮ ಒಕ್ಕಲಿಗ ಸಮುದಾಯ ಭವನ, ಮಣಕಿ–ಮಾನೀರದಲ್ಲಿ 6ನೇ ವರ್ಷದ ಗ್ರಾಮ ಒಕ್ಕಲು ಕಲಾ ಸೌರಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಯುವ ಬಳಗವು ಕಳೆದ 11 ವರ್ಷಗಳಲ್ಲಿ 452 ಜನರಿಗೆ ರಕ್ತದಾನ ನೆರವು ಒದಗಿಸಿದ್ದು, ಅಪಘಾತ ಪರಿಹಾರ ನಿಧಿಯಾಗಿ ತಲಾ 7,500 ರೂ.ಗಳಂತೆ 140 ಫಲಾನುಭವಿಗಳ ಮನೆಗೆ ತೆರಳಿ ಪರಿಹಾರ ವಿತರಿಸಿದೆ. ಕರೋನಾ ಮಹಾಮಾರಿ ಸಂದರ್ಭದಲ್ಲಿ 168 ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ ಚಾಚಿದೆ. ಇದಲ್ಲದೆ ಕೃಷ್ಣವೇಷ ಸ್ಪರ್ಧೆ, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿ ಸಮಾಜದ ಒಗ್ಗಟ್ಟಿಗೆ ಶ್ರಮಿಸಿದೆ.

ಸಮಾಜದ ಬಹುತೇಕ ಕುಟುಂಬಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡಿರುವ ತೃಪ್ತಿ ಯುವ ಬಳಗಕ್ಕಿದ್ದು, ಬೇರೆ ಬೇರೆ ತಾಲೂಕಿನ ಸಂಘಟನೆಗಳಿಗೆ ಸಹಕಾರ ನೀಡಲಾಗಿದೆ. ಒಟ್ಟಾರೆ 11 ವರ್ಷಗಳಲ್ಲಿ ಸಮಾಜಮುಖಿ ಕಾರ್ಯಗಳಿಗೆ ಸುಮಾರು 50 ಲಕ್ಷ ರೂ.ಗೂ ಅಧಿಕ ಮೊತ್ತದ ವಹಿವಾಟು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಾ ಸೌರಭ ಕಾರ್ಯಕ್ರಮದಲ್ಲಿ 7ರಿಂದ 10ನೇ ತರಗತಿಯವರೆಗೆ ಗಾಯನ ಸ್ಪರ್ಧೆ, 10ನೇ ತರಗತಿ ಮೇಲ್ಪಟ್ಟವರಿಗೆ ಯುಗಲ್ ಗೀತೆ, 5ರಿಂದ 9ನೇ ತರಗತಿಯವರೆಗೆ ಹಾಗೂ 10ನೇ ತರಗತಿ ಮೇಲ್ಪಟ್ಟವರಿಗೆ ವೈಯಕ್ತಿಕ ನೃತ್ಯ ಸ್ಪರ್ಧೆಗಳು, ಎಲ್.ಕೆ.ಜಿ.ಯಿಂದ 4ನೇ ತರಗತಿವರೆಗೆ, 5ರಿಂದ 9ನೇ ತರಗತಿ ಹಾಗೂ 10ನೇ ತರಗತಿ ಮೇಲ್ಪಟ್ಟವರಿಗೆ ಗುಂಪು ನೃತ್ಯ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ 21 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗುಂಪು ಜಾನಪದ ನೃತ್ಯ ಸ್ಪರ್ಧೆ, ಎಲ್.ಕೆ.ಜಿ.ಯಿಂದ 4ನೇ ತರಗತಿಯವರೆಗೆ ಛದ್ಮವೇಷ ಸ್ಪರ್ಧೆ ಹಾಗೂ 10ನೇ ತರಗತಿ ಮೇಲ್ಪಟ್ಟವರಿಗೆ ಛದ್ಮವೇಷದ ಮೂಲಕ ಅಭಿವ್ಯಕ್ತಿ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಮಿರ್ಜಾನ ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಗ್ರಾಮ ಒಕ್ಕಲಿಗರ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ಪಟಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವರ್ಷದ ವೇದಿಕೆಯ ಗಣ್ಯರಾಗಿ ಗ್ರಾಮ ಒಕ್ಕಲು ಸಮಾಜದ ಪ್ರಥಮ ದರ್ಜೆ ಗುತ್ತಿಗೆದಾರರನ್ನು ಆಹ್ವಾನಿಸಲಾಗಿದೆ.

ಸಮಾಜದ ಪ್ರತಿಭೆಗಳಿಂದ ತುಂಬಿ ತುಳುಕುವ ಈ ಕಾರ್ಯಕ್ರಮದಲ್ಲಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯುವ ಬಳಗವು ಮನವಿ ಮಾಡಿಕೊಂಡಿದೆ.

ಇದನ್ನೂ ಓದಿ/ಡಿಕೆಶಿಗೆ ಸಿಎಂ ಸ್ಥಾನಕ್ಕೆ ದೇವರ ಸೂಚನೆ..! ಬಲಗಡೆ ಹೂ ಸಂಕೇತ