ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಮುಖ್ಯಮಂತ್ರಿ ಪಟ್ಟಕ್ಕೇರಲು ಕಸರತ್ತು ನಡೆಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ದೇವರ ಮೊರೆ ಹೋಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೇ ಹಿನ್ನಲೆಯಲ್ಲಿ ಇಂದು ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಾಲಯದ ಜೊತೆಗೆ ಅಂಕೋಲಾ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಆಂದ್ಲೆ ಜಗದೇಶ್ವರಿ ದೇವಾಲಯಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ ಡಿಕೆಶಿ ಅವರು ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗ ಸ್ಪರ್ಶ ಪೂಜೆ ಹಾಗೂ ಗಣಪತಿ ದೇವರ ಸ್ಪರ್ಶ ಪೂಜೆಯನ್ನು ನೆರವೇರಿಸಿದರು. ಬಳಿಕ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದಲ್ಲಿರುವ ಜಗದೇಶ್ವರಿ ದೇವಾಲಯಕ್ಕೆ ತೆರಳಿ ಕಾಳರಾತ್ರಿ ಎಳ್ಳು ಅಮವಾಸ್ಯೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಜಗದೇಶ್ವರಿ ದೇವಾಲಯದ ಗರ್ಭಗುಡಿಯೊಳಗೆ ಡಿಕೆಶಿ ಅವರು ಅರ್ಚಕರೊಂದಿಗೆ ಬರೋಬ್ಬರಿ ಎರಡು ತಾಸುಗಳ ಕಾಲ ಪೂಜೆ ಹಾಗೂ ಪ್ರಶ್ನಾ ಕಾರ್ಯ ನೆರವೇರಿಸಿದರು. ಈ ಅವಧಿಯಲ್ಲಿ ದೇವಾಲಯದ ಬಾಗಿಲು ಮುಚ್ಚಲಾಗಿದ್ದು,ಡಿಕೆಶಿ ಅವರೊಂದಿಗೆ ಆಗಮಿಸಿದ್ದ ಅಭಿಮಾನಿಗಳು, ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲಿ ಸೇರಿದಂತೆ ಇತರ ಗಣ್ಯರಿಗೆ ಹೊರಗಡೆಯೇ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಯಾರಿಗೂ ಒಳಗೆ ಪ್ರವೇಶಕ್ಕೆ ಅವಕಾಶ ನೀಡದೆ ಗುಪ್ತವಾಗಿ ಪೂಜೆ ಮತ್ತು ಪ್ರಶ್ನಾ ಕಾರ್ಯ ನಡೆದಿರುವುದು ಭಕ್ತರು ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಯಿತು.
ಈ ಹಿಂದೆ 2019ರ ಡಿಸೆಂಬರ್ ತಿಂಗಳಲ್ಲಿ ಡಿಕೆಶಿ ಅವರು ಜಗದೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಸಂದರ್ಭದಲ್ಲಿ ಇಷ್ಟಾರ್ಥ ಸಿದ್ಧಿಯಾಗಿತ್ತು ಎನ್ನಲಾಗುತ್ತಿದೆ. ಕಳೆದ ಆರು–ಎಂಟು ವರ್ಷಗಳಿಂದ ಡಿಕೆಶಿ ಅವರ ಕುಟುಂಬ ಆಂದ್ಲೆ ಜಗದೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತ ಬಂದಿದೆ. ಇಡಿ ಸಂಕಷ್ಟದ ಸಮಯದಲ್ಲೂ ದೇವಿಯ ಕೃಪೆಯಿಂದ ಬಿಡುಗಡೆ ಭಾಗ್ಯ ದೊರೆಯಲಿದೆ ಎಂದು ಅರ್ಚಕರು ನುಡಿದಿದ್ದು, ನಂತರ ಡಿಕೆಶಿ ಅವರು ಆ ಸಂಕಷ್ಟದಿಂದ ಪಾರಾಗಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ದೇವಿಯ ಮಹಿಮೆ ಹಾಗೂ ಪವಾಡದಿಂದ ಹಲವಾರು ಇಷ್ಟಾರ್ಥಗಳು ಈಡೇರಿವೆ ಎಂದು ಅರ್ಚಕರಿಂದಲೇ ತಿಳಿದುಬಂದಿದೆ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕೇರಲು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ, ಆರು ವರ್ಷಗಳ ಬಳಿಕ ಮತ್ತೆ ಜಗದೇಶ್ವರಿ ದೇವಿಯ ಮೊರೆ ಹೋಗಿರುವ ಡಿಕೆಶಿ ಅವರು ಎಲ್ಲ ಅಡೆತಡೆಗಳು ನಿವಾರಣೆಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಜಗದೇಶ್ವರಿ ದೇವಿಯ ಮುಂದೆ ನಡೆದ ಎರಡು ತಾಸುಗಳ ಪೂಜೆ ಹಾಗೂ ಪ್ರಶ್ನಾ ಕಾರ್ಯ ಡಿಕೆಶಿ ಅವರಿಗೆ ಯಾವ ರೀತಿಯ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ/ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು


