ಸುದ್ದಿಬಿಂದು ಬ್ಯೂರೋ ವರದಿ
ಬೆಳಗಾವಿ : ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ರಾಜೇಂದ್ರ ಪ್ರಸಾದ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸವದತ್ತಿ ಹೊರವಲಯದಲ್ಲಿ ನಡೆದಿದೆ.

ಸುದ್ದಿಬಿಂದು.ಇನ್‌ಗೆ ಸಿಕ್ಕಿರುವ ಮಾಹಿತಿಯಂತೆ, ಪಿಎಸ್ ರಾಜೇಂದ್ರ ಪ್ರಸಾದ್ ಅವರು ಡಿಕೆ ಶಿವಕುಮಾರ ಅವರು ನಾಳೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪಿಎಸ್ ಇವತ್ತು ರಾತ್ರಿಯೇ ಕಾರವಾರ ಕಡೆ
ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾರು ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತ ದುರ್ದೈವಿಯನ್ನು ಸವದತ್ತಿ ಪಟ್ಟಣದ ನಿವಾಸಿ ಮಂಜುನಾಥ್ ಬೈರ್ನಟ್ಟಿ (30) ಎಂದು ಗುರುತಿಸಲಾಗಿದೆ. ಮಂಜುನಾಥ್ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಕಾರಿನ ಡಿಕ್ಕಿಯಿಂದಾಗಿ ಮಂಜುನಾಥ್ ಅವರ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪಿಎಸ್ ರಾಜೇಂದ್ರ ಪ್ರಸಾದ್ ಅವರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ವತಃ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಪಘಾತದ ನಿಖರ ಕಾರಣ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ