ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅವುರ್ಲಿ, ಗಣೇಶ ಗುಡಿ ಪ್ರದೇಶದಲ್ಲಿ ಹೆಣ್ಣಾನೆಯೊಂದು ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಜೋಯಿಡಾ ಅರಣ್ಯ ಭಾಗದಿಂದ ಬಂದಿರುವ ಆನೆ, ಗ್ರಾಮಾಂತರ ಪ್ರದೇಶಕ್ಕೆ ನುಗ್ಗಿ ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳಿಗೆ ಭಾರೀ ಹಾನಿ ಉಂಟುಮಾಡಿದೆ.

ಆನೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳೆ ನಷ್ಟದ ವಿವರಗಳನ್ನು ಸಂಗ್ರಹಿಸಿ, ಮುಂದಿನ ಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ.

ಇನ್ನು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ, ಅರಣ್ಯ ಸಿಬ್ಬಂದಿಗಳು ಆನೆಯನ್ನು ದಾಂಡೇಲಿ ಅರಣ್ಯ ಭಾಗದ ಕಡೆಗೆ ಓಡಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಆನೆ ಮತ್ತೆ ಗ್ರಾಮ ಪ್ರದೇಶಕ್ಕೆ ಪ್ರವೇಶಿಸದಂತೆ ನಿಗಾ ವಹಿಸಲಾಗಿದ್ದು, ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ.

ಜೋಯಿಡಾ ಅರಣ್ಯ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ, ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ/Karavali Utsav/ಕರಾವಳಿ ಉತ್ಸವ ದಿನಾಂಕ ಮಾತ್ರ ನಿಗದಿ: ಆಚರಣೆ ಇನ್ನೂ ಅನುಮಾನ..!