ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನವೆಂಬರ್ ತಿಂಗಳಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೇರಲು ತಂತ್ರ ರೂಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನವೆಂಬರ್‌ನಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಮೂವರು ದಿನಾಂಕಗಳನ್ನು ಜ್ಯೋತಿಷಿಗಳ ಸಲಹೆಯಂತೆ ನಿಗದಿಪಡಿಸಿರುವುದಾಗಿ ತಿಳಿದುಬಂದಿದೆ.

ಸಿಎಂ ಗಾದಿಗಾಗಿ ಮುಹೂರ್ತ ನಿಗದಿಪಡಿಸಿರುವ ಡಿಕೆಶಿ, ನವೆಂಬರ್ 21ನೇ ತಾರೀಕು ಸೇರಿದಂತೆ ಮೂರು ದಿನಗಳಲ್ಲಿ ಒಂದರಲ್ಲಿ ಪ್ರಮಾಣವಚನ ಸ್ವೀಕರಿಸುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಅವರು ಹೈಕಮ್ಯಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತರಿಗೆ ಸ್ಪಷ್ಟ ಸಂದೇಶ ರವಾನಿಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಹೈಕಮ್ಯಾಂಡ್‌ಗೆ ‘ನವೆಂಬರ್ ಕ್ರಾಂತಿ’ ಸಂದೇಶವನ್ನೂ ನೀಡಿರುವ ಡಿಕೆಶಿ, “ಆ ದಿನಾಂಕದೊಳಗೆ ಬದಲಾವಣೆ ಆಗದಿದ್ದರೆ ಮುಂದೇನು ಮಾಡಬೇಕು ಎಂಬುದಕ್ಕೂ ಯೋಜನೆ ಸಿದ್ಧ” ಎಂದು ಆಪ್ತ ವಲಯದಲ್ಲಿ ಹೇಳಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಹೈಕಮ್ಯಾಂಡ್ ಹಾಗೂ ರಾಹುಲ್ ಗಾಂಧಿಯ ಆಪ್ತರಿಗೆ ಸಹ ಇದೇ ವಿಷಯ ತಿಳಿದುಬಂದಿದ್ದು, ಪಕ್ಷದ ಒಳವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಪಾಳಯದಲ್ಲೂ ಈ ಬೆಳವಣಿಗೆ ಚರ್ಚೆಗೆ ಕಾರಣವಾಗಿದೆ.

ರಾಜಕೀಯ ವಲಯದಲ್ಲಿ ಈಗ “ಕಾಂಗ್ರೆಸ್‌ನಲ್ಲೂ ಬಿರುಗಾಳಿ ಬರುವ ಮುನ್ಸೂಚನೆ ಇದೆಯಾ?” ಎಂಬ ಪ್ರಶ್ನೆ ಕೇಳಿಬರುತ್ತಿದೆ. 2008 ರಿಂದ 2013 ಮತ್ತು 2019 ರಿಂದ 2023ರ ಅವಧಿಯಲ್ಲಿ ಬಿಜೆಪಿ ಪಕ್ಷದಲ್ಲಿ ನಡೆದ ನಾಯಕತ್ವ ಬದಲಾವಣೆಗಳಂತೆಯೇ, ಇದೀಗ ಕಾಂಗ್ರೆಸ್‌ನಲ್ಲೂ ಅದೇ ತರದ ರಾಜಕೀಯ ಚಟುವಟಿಕೆಗಳು ಗೋಚರಿಸುತ್ತಿವೆ.

ಇದನ್ನೂ ಓದಿ/ಮುಗಿಯದ ಮಳೆ-ರಗಳೆ – ರೈತಾಬಿ ವರ್ಗ ಕಂಗಾಲು