ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಅಡಿಕೆ ಬೆಳೆಯನ್ನು ತಂಬಾಕು. ನಿಕೋಟಿನ್ ನಂತಹ ಮಾದಕ ಉತ್ಪನ್ನಗಳ ಜೋತೆ ಸೇರಿಸಿಕೊಂಡು ವಿಶ್ವ ಆರೋಗ್ಯ ಸಂಸ್ಥೆಯು (WHO) ಉತ್ಪಾದನೆ ಮತ್ತು ಬಳಕೆಯ ನಿಷೇಧದ ಬಗ್ಗೆ ನಿರ್ಣಯಗಳನ್ನು ಕೈಗೊಂಡಿರುವುದರ ಬಗ್ಗೆ ಇಂದು ಅಂಕೋಲಾ ತಾಲೂಕಿನ ಅಗಸೂರು ಗ್ರಾಮದಲ್ಲಿ ನಡೆದ ಅಡಿಕೆ ಬೆಳೆಗಾರ ರೈತರ ಸಭೆಯಲ್ಲಿ ವಿವರವಾಗಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ WHO ನಿರ್ಣಯ ವಿರುದ್ಧ ಕಾನೂನು ಸಮರ ನಡೆಸಲು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಇದೆ ಅಕ್ಟೋಬರ್ 13 ರಿಂದ 15 ರ ವರೆಗೆ ಶ್ರೀಲಂಕಾ ದ ಕೊಲಂಬೊ ದಲ್ಲಿ ಜರುಗಿದ ದಕ್ಷಿಣ ಏಷ್ಯಾ ದೇಶಗಳ ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಾದೇಶಿಕ ಸಭೆಯಲ್ಲಿ ಅಡಿಕೆ ಬೆಳೆಯನ್ನು ಕೂಡ ಹಾನಿಕಾರಕವೆಂದು ಪರಿಗಣಿಸಿರುವುದು ಆಘಾತಕಾರಿ ಎಂದು ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು. ಈ ತೀರ್ಮಾನವು ಮಾದಕ ಉತ್ಪನ್ನಗಳ ಜೊತೆ ಅಡಿಕೆ ಉತ್ಪಾದನೆ, ಮಾರಾಟ,ಜಾಹಿರಾತು, ಪ್ರಚಾರ ಮತ್ತು ಪ್ರಾಯೋಜಕತ್ವದ ಸಂಪೂರ್ಣ ನಿಷೇಧವಾಗಲಿದೆ. ಇದು ಅಡಿಕೆ ಬೆಳೆಯನ್ನೆ ನಂಬಿಕೊಂಡ ಬೆಳೆಗಾರರ ಭವಿಷ್ಯಕ್ಕೆ ಮಾರಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಭೆ ಅಭಿಪ್ರಾಯ ಪಟ್ಟಿತು.
ಕೇಂದ್ರ ಸರಕಾರವು 16 ಸಂಶೋಧನಾ ಸಂಸ್ಥೆಗಳಿಗೆ ಅನುದಾನ ನೀಡಿ ಅಡಿಕೆಯು ಹಾನಿಕಾರಕವಲ್ಲವೆಂದು ಸಾಬೀತು ಪಡಿಸಲು ಸಂಶೋದನೆ ನಡೆಸಲು ಹೇಳಿದೆ ಎಂದು ತಿಳಿದಿದೆ, ಈ ಸಂಸ್ಥೆಗಳಿಂದ ಅಂತಿಮ ಸಂಶೋದನಾ ವರದಿ ತರಿಸಿ ಸೂಕ್ತ ಕಾನೂನು ಹೋರಾಟ ನಡೆಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ ಜಿಲ್ಲಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಲೇ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಬೆಳೆಗಾರರ ಪರವಾಗಿ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು,
ತಾಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ ಸ್ವಾಗತಿಸಿದರು, ತಾಲೂಕಿನ ಅಗಸೂರು, ಸುಂಕಸಾಳ, ಅಚವೆ, ಹಿಲ್ಲೂರ, ಮೊಗಟಾ, ವಾಸರಕುದ್ರಿಗೆ,ಅಲಗೇರಿ, ಡೋಂಗ್ರಿ ಪಂಚಾಯತ್ ವ್ಯಾಪ್ತಿಯಿಂದ ಅಡಿಕೆ ಬೆಳೆಗಾರರು ಸಭೆಯಲ್ಲಿ ಹಾಜರಿದ್ದರು, ಗ್ರಾ.ಪಂ.ಸದಸ್ಯರಾದ ರಾಮಚಂದ್ರ ನಾಯ್ಕ, ಶೋಭಾ ಗೌಡ, ಚಂದ್ರು ನಾಯ್ಕ ಕೊಡ್ಲಗದ್ದೆ, ಅಲಗೇರಿ ಪಂಚಾಯತ ಅಧ್ಯಕ್ಷರಾದ ಸಂತೋಷ ನಾಯ್ಕ, ಸುಂಕಸಾಳ ಮಾಜಿ ಅದ್ಯಕ್ಷರಾದ ನಾರಾಯಣ ನಾಯಕ, ರೈತ ಮುಖಂಡರಾದ ರಮಾನಂದ ನಾಯಕ ಅಚವೆ, ಮಾದೇವ ನಾಯಕ ಮಾಬಗಿ, ಕೇಶವ ನಾಯಕ ಶಿರಗುಂಜಿ, ಅನಂತ ಗೌಡ ಅಗಸೂರು, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರ, ಮಾಣಿ ಭಟ್,ವೆಂಕಟರಮಣ ಹೆಗಡೆ ಸುಂಕಸಾಳ, ರಾಮದಾಸ ನಾಯಕ, ರಮೇಶ್ ನಾಯಕ, ಗೋವಿಂದ ಸುಬ್ರಾಯ ಮುಕ್ರಿ, ಸವಿತಾ ನಾಯಕ, ಬೆಳ್ಳಾ ರಮಣಿ ಕುಣಬಿ, ಮಾದೇವ ಕುಸ್ಲು ಗೌಡ ಮುಂತಾದವರು ಹಾಜರಿದ್ದರು.

 
							
 
			 
			 
			 
			
