ಸುದ್ದಿಬಿಂದು ಬ್ಯೂರೋ ವರದಿ
ಮೈಸೂರು: ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ಅಕ್ಕ–ತಂಗಿ ಇಬ್ಬರೂ ಸಾವನ್ನಪ್ಪಿದ ದುರ್ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

ಸ್ನಾನಕ್ಕೆ ಇಬ್ಬರೂ ಒಟ್ಟಿಗೆ ಬಾತ್‌ರೂಮ್‌ಗೆ ಹೋದ ವೇಳೆ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೃತರಾದವರು 23 ವರ್ಷದ ಗುಲ್ಫಾಮ್ ತಾಜ್ ಹಾಗೂ 20 ವರ್ಷದ ಸಿಮ್ರಾನ್ ತಾಜ್ ಎಂಬ ಸಹೋದರಿಯರು ಮೃತಪಟ್ಟವರಾಗಿದ್ದಾರೆ.

ಬಾತ್‌ರೂಮ್‌ನಲ್ಲಿ ಯಾವುದೇ ಕಿಟಕಿ ಇಲ್ಲದ ಕಾರಣ ಗಾಳಿ ಹರಿವಿಲ್ಲದೇ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.. ಸ್ನಾನಕ್ಕೆ ಹೋದ ತಮ್ಮ ಮಕ್ಕಳು ಬಹಳ ಹೊತ್ತಾದರೂ ಹೊರಗೆ ಬರದ ಕಾರಣ ತಂದೆ ಬಾಗಿಲು ಬಡಿದಿದ್ದಾರೆ. ಒಳಗಡೆಯಿಂದ ಯಾವುದೆ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಆತಂಕಗೊಂಡ ತಂದೆ ಬಾಗಿಲು ಒಡೆದು ಒಳಗೆ ನುಗ್ಗಿದಾಗ ಇಬ್ಬರೂ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ.

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ತಪಾಸಣೆ ಮಾಡಿದ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ/ಪುರಸಭೆ ಮುಖ್ಯಾಧಿಕಾರಿ ಮರುನಿಯೋಜನೆಗೆ ಹುನ್ನಾರ : ಸಾಮೂಹಿಕ ರಾಜೀನಾಮೆಗೆ ಮುಂದಾದ ಸದಸ್ಯರು