ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಇಲ್ಲಿ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರನ್ನು ಪುನಃ ನಿಯೋಜಿಸಿದರೆ, ಸರ್ವಪಕ್ಷದ ಸದಸ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.
ಅಂಕೋಲಾ ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಪೈಕಿ 19 ಮಂದಿ ಸದಸ್ಯರು ಒಮ್ಮತದಿಂದ ಈ ತೀರ್ಮಾನ ಕೈಗೊಂಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪೌರಾಡಳಿತ ಸಚಿವರು, ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಎಚ್. ಅಕ್ಷತಾ ಹಾಗೂ ಕಿರಿಯ ಅಭಿಯಂತರ ಶಬ್ದಾ ನಾಯ್ಕ ಅವರು ಹಿಂದಿನಿಂದಲೂ ಪುರಸಭೆಯ ಆಡಳಿತ ಮಂಡಳಿಯ ಗಮನಕ್ಕೆ ತರದೆ, ಹಲವು ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತ್ತು ಮಾಡಲಾಗಿದೆ.
ಅಮಾನತ್ತಿನ ವಿರುದ್ಧ ಅಧಿಕಾರಿಗಳು ನ್ಯಾಯಾಲಯ ಮೊರೆ ಹೋಗಿದ್ದು, ತಾತ್ಕಾಲಿಕ ತಡೆ ಆದೇಶ ದೊರೆತಿದೆ. ಆದರೆ ನ್ಯಾಯಾಲಯದಿಂದ ಅವರನ್ನು ಅದೇ ಸ್ಥಳದಲ್ಲಿ ಮರುನಿಯೋಜನೆ ಮಾಡಬೇಕೆಂಬ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದು ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪ್ರಭಾರಿ ಮುಖ್ಯಾಧಿಕಾರಿಯ ನೇಮಕದಿಂದ ಪುರಸಭೆಯ ಆಡಳಿತ ಸುಧಾರಣೆ ಕಂಡಿದೆ. ಆದರೆ, ಅಮಾನತ್ತು ಹೊಂದಿದ ಅಧಿಕಾರಿಗಳನ್ನು ಪುನಃ ಅದೇ ಸ್ಥಾನಕ್ಕೆ ನಿಯೋಜನೆ ಮಾಡಿದರೆ “ಸಾಕ್ಷ್ಯನಾಶ ಸಾಧ್ಯತೆ ಉಂಟಾಗುವುದಷ್ಟೇ ಅಲ್ಲದೆ, ಸಾರ್ವಜನಿಕ ಹಣದ ದುರುಪಯೋಗ ಆಗಲಿದೆ” ಒಂದೊಂಮ್ಮೆ ಅವರನ್ನೆ ಮರು ನಿಯೋಜನೆ ಮಾಡಿಕೊಂಡಲ್ಲಿ ಎಲ್ಲಾ ಸದಸ್ಯರೂ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ /ನವೆಂಬರ್ 23ಕ್ಕೆ ಕುಮಟಾ ತಾಲ್ಲೂಕು l0 ನೇ ಕನ್ನಡ ಸಾಹಿತ್ಯ ಸಮ್ಮೇಳನ

