ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕೆಡಿಸಿಸಿ ಬ್ಯಾಂಕ್ ಚುನಾವಣೆಯ ರಾಜಕೀಯ ಕಾವು ದಿನೇದಿನೇ ಹೆಚ್ಚಾಗುತ್ತಿದ್ದರೆ, ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಮಂಕಾಳ ವೈದ್ಯ ಮತ್ತು ಮಾಜಿ ಸಚಿವ ಶಿವರಾಮ ಹೆಬ್ಬಾರ್ ನಡುವೆ ಪೈಪೋಟಿ ಉಂಟಾಗಿದೆ. ಆದರೆ ಸದ್ಯದ ಕೆಡಿಸಿಸಿ ಬ್ಯಾಂಕ್ ರಾಜಕೀಯ ವಾತಾವರಣ ಹಾಗೂ ಸದಸ್ಯರ ನಿಲುವು ನೋಡಿದರೆ ಮಂಕಾಳ ವೈದ್ಯರೇ ಈ ಭಾರಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತ ಎನ್ನಲಾಗಿದೆ..

ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಈಗಾಗಲೇ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಅವರು ಈಗ ಅಧಿಕೃತವಾಗಿ ಬಿಜೆಪಿಯಿಂದ ಹೊರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳಲು ಹೆಬ್ಬಾರ್ ಅವರಿಗೆ ಕಾಂಗ್ರೆಸ್ ನಾಯಕರ ಬೆಂಬಲ ಅನಿವಾರ್ಯವಾಗಿದೆ. ಈ ಸ್ಥಿತಿಯಲ್ಲಿ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಮಂಕಾಳ ವೈದ್ಯರ ವಿರುದ್ಧ ನೇರ ಪೈಪೋಟಿಗೆ ಇಳಿಯುವುದು ರಾಜಕೀಯವಾಗಿ ಹೆಬ್ಬಾರ್ ಅವರಿಗೆ ಹಿನ್ನಡೆಯಾಗಬಹುದು ಎಂದು ರಾಜಕೀಯ ವಲಯದಲ್ಲಿ ಸದ್ಯ ಕೇಳಿ ಬರುತ್ತಿರುವ ಚರ್ಚೆಯಾಗಿದೆ.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ಹೆಬ್ಬಾರ್ ತಮ್ಮ ರಾಜಕೀಯ ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡು  ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ‌ ಎನ್ನಲಾಗುತ್ತಿದೆ. ಮಂಕಾಳ ವೈದ್ಯರ ವಿರುದ್ಧ ತೀವ್ರ ಸ್ಪರ್ಧೆಗೆ ಮುಂದಾದರೆ ಮುಂದಿನ ರಾಜ್ಯ ರಾಜಕೀಯದಲ್ಲಿ ಹೆಬ್ಬಾರ್ ಅವರಿಗೆ ಅವಕಾಶಗಳ ಬಾಗಿಲು ಮುಚ್ಚುವ ಅಪಾಯವೂ ಇದೆ ಎಂದು ಅವರ ಆಪ್ತ ವಲಯದಿಂದಲ್ಲೇ ಕೇಳಿ ಬರುತ್ತಿದೆ.

ಇದರಿಂದಲೇ ತೆರೆಮರೆಯಲ್ಲಿ ಹೆಬ್ಬಾರ್ ಮಂಕಾಳ ವೈದ್ಯರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾತುಗಳು ಕೆಡಿಸಿಸಿ ಬ್ಯಾಂಕ್ ವಲಯದಲ್ಲೂ ಕೇಳಿ ಬರುತ್ತಿವೆ. ಆದರೆ ಅಧಿಕೃತವಾಗಿ ಇಬ್ಬರೂ ನಾಯಕರೂ ತಮ್ಮ ತಮ್ಮ ಬಣವನ್ನು ಸಂಘಟಿಸಲು ತೊಡಗಿರುವುದರಿಂದ ಅಂತಿಮ ಕ್ಷಣದಲ್ಲಿ ಉಂಟಾಗುವ ತಿರುವುಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

ಒಟ್ಟಿನಲ್ಲಿ ಕೆಡಿಸಿಸಿ ಬ್ಯಾಂಕ್ ಚುನಾವಣೆಯ ಪ್ರಕ್ರೀಯೆಯಲ್ಲಿ ಪ್ರಸ್ತುತದಲ್ಲಿ ಸಚಿವ ಮಂಕಾಳ ವೈದ್ಯರೇ ಮುಂಚುಣಿಯಲ್ಲಿದ್ದಾರೆ ಎನ್ನುವ  ಮಾತು ಕೇಳಿಬರುತ್ತಿವೆ, ಈ ಬಾರಿ ಹೇಗಾದ್ರು ಮಾಡಿ ವೈದ್ಯರನ್ನೇ ಅಧ್ಯಕ್ಷ ಮಾಡಬೇಕು ಎಂದು ಕೆಡಿಸಿಸಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ….

ಇದನ್ನೂ ಓದಿ/ಉತ್ತರಕನ್ನಡದಲ್ಲಿ ಸಹಾಯಕ ಕಮಿಷನರ್ ಅಧಿಕಾರಿಗಳ ಕೊರತೆ: ಸಂಕಷ್ಟದಲ್ಲಿ ಸಿಲುಕಿರುವ ಜನತೆ