ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಗಣತಿ ಕಾರ್ಯ ಮುಗಿಯದೇ ಇರುವ ಕಾರಣದಿಂದ ಅಕ್ಟೋಬರ್ 8ರಿಂದ ಶಿಕ್ಷಕರು ಎರಡೂ ಕೆಲಸಗಳನ್ನು ನಿರ್ವಹಿಸಬೇಕಾದ ಸ್ಥಿತಿ ಉಂಟಾಗಿದ್ದು, ನಾಳೆಯಿಂದ ಅರ್ದ ದಿನ ಶಾಲೆ ಹಾಗೂ ಇನ್ನೂ ಅರ್ಧ ದಿನ ಗಣತಿ ಮಾಡಬೇಕಿದೆ.

ಬೆಳಿಗ್ಗೆ ಶಾಲಾ ಬೋಧನೆ ಮತ್ತು ಬಳಿಕ ಸಂಜೆ ಗಣತಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಈ ವ್ಯವಸ್ಥೆ ಅಕ್ಟೋಬರ್ 12ರವರೆಗೆ ಮುಂದುವರೆಯಲಿದೆ, ಆದರೆ ಗಣತಿ ಮುಗಿಯದಿದ್ದರೆ ಅವಧಿ ಹೆಚ್ಚಿಸುವ ಸಾಧ್ಯತೆ ಕೂಡ ಇದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ದಸರಾ ರಜೆಯ ಅವಧಿಯಲ್ಲಿ ಹಲವು ಶಿಕ್ಷಕರು ಈಗಾಗಲೇ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಕ್ಟೋಬರ್ 8ರಿಂದ ಶಾಲೆಗಳು ಪುನರಾರಂಭವಾಗುತ್ತಿರುವುದರಿಂದ, ಬೋಧನೆಯನ್ನು ಮುಂದುವರೆಸುತ್ತಲೇ ಸಮೀಕ್ಷಾ ಕರ್ತವ್ಯವನ್ನೂ ನಿರ್ವಹಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.ಸಾಮಾನ್ಯವಾಗಿ ಶಾಲೆಗಳ ಸಮಯ ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಇರುತ್ತದೆ. ಆದರೆ, ಗಣತಿ ಕಾರ್ಯದ ಅನುಕೂಲಕ್ಕಾಗಿ ಅಕ್ಟೋಬರ್ 8ರಿಂದ 12ರವರೆಗೆ (ಗ್ರೇಟರ್ ಬೆಂಗಳೂರು ಹೊರತುಪಡಿಸಿ) ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಡೆಯಲಿವೆ. ನಂತರದ ಅವಧಿಯನ್ನು ಗಣತಿ ಕಾರ್ಯಕ್ಕೆ ಮೀಸಲಿಡಲಾಗಿದೆ.ಹೀಗಾಗಿ ನಾಳೆಯಿಂದ ಶಾಲೆಗಳು ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ.

 ಇದನ್ನು ಓದಿ: ನಾಡುಮಾಸ್ಕೇರಿ ಸರ್ಕಾರಿ ಭೂಮಿಯ ಅಕ್ರಮ ಮಾರಾಟ: ಈಶ್ವರ ಗೌಡ ಆರೋಪ