ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದರಿಂದ, ಶಾಲಾ ಶಿಕ್ಷಣ ಇಲಾಖೆ ಅಕ್ಟೋಬರ್ 8 ರಿಂದ 11ರ ತನಕ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿ, ಪೂರ್ವಾಹ್ನ ಎಂಟರಿಂದ ಒಂದು ಗಂಟೆಯವರೆಗೆ ಶಾಲಾ ಕರ್ತವ್ಯ ಪೂರೈಸಿ,ನಂತರ ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರು ತೊಡಗಬೇಕಾಗಿ ಮಾಡಿರುವ ಆದೇಶಕ್ಕೆ ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯ ಅಧ್ಯಾಪಕರ ಸಂಘ ವಿರೋಧ ವ್ಯಕ್ತಪಡಿಸಿದ್ದು ಈ ಆದೇಶ ವಾಪಸ ಪಡೆಯುವಂತೆ ಒತ್ತಾಯಿಸಿದೆ.
ಈಗಾಗಲೇ ದಸರಾ ರಜೆಯನ್ನು ಅನುಭವಿಸದೇ, ಸಮೀಕ್ಷಾ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಕೊಂಡಿರುವ ಶಿಕ್ಷಕರಿಗೆ ಡಬಲ್ ಧಮಾಕಾ ಡ್ಯೂಟಿ ಎನ್ನುವಂತೆ ಶಾಲಾ ಕರ್ತವ್ಯ ನಿರ್ವಹಿಸಿ, ಮತ್ತೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಿಂದ ಉಂಟಾಗಿದೆ.
ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಳ್ಳುವ ಅನಿವಾರ್ಯತೆಯಿಂದ ಚಿಕ್ಕ ಮಕ್ಕಳಿಗೆ ಅತಿ ಬೇಗ ತೆರಳುವ ಸಂಕಟ ಎದುರಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಮತ್ತು ಶಾಲಾ ವಾಹನದಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಈ ಆದೇಶ ಪೂರ್ಣವಾಗಿ ಅನುಷ್ಠಾನಗೊಳಿಸಲು ಕಷ್ಟವಾಗುತ್ತದೆ. ಶಿಕ್ಷಕರು ಶಾಲಾ ಒತ್ತಡದೊಂದಿಗೆ ಸಮೀಕ್ಷೆ ಕಾರ್ಯವನ್ನು ದೂರದ ಊರಿಗೆ ತೆರಳಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಆಗಿರುವುದರಿಂದ ಆದೇಶವನ್ನು ತಕ್ಷಣ ವಾಪಸ್ ಪಡೆದು ದಸರಾ ರಜೆಯನ್ನು ಮತ್ತೆರಡು ದಿನ ಮುಂದುವರಿಸಿ ಸಮೀಕ್ಷೆ ಕಾರ್ಯದಲ್ಲಿ ಪೂರ್ಣವಾಗಿ ಶಿಕ್ಷಕರನ್ನು ಬಿಟ್ಟು ಸಮೀಕ್ಷೆ ಪೂರ್ಣಗೊಳಿಸಲು ಆದೇಶ ಮಾರ್ಪಾಡು ಮಾಡುವಂತೆ ಉತ್ತರಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಎಲ್.ಎಮ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.