ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಮಹಿಳೆಯೊಬ್ಬರ ಮೈ ಮುಟ್ಟಿದ ಪ್ರಕರಣದಲ್ಲಿ ಕಾರವಾರದ ಮನೋಜ ಸೈಲ್’ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ 8ಸಾವಿರ ರೂ ದಂಡ ವಿಧಿಸಿದೆ.

2019ರ ಸೆಪ್ಟೆಂಬರ್ 1ರ ರಾತ್ರಿ ಕಾರವಾರದ ಮಾಜಾಳಿಯ ಬಜಾರಿನ ಮನೋಜ ಸೈಲ್ ಮಹಿಳೆಯೊಬ್ಬರ ಮೇಲೆ ಕಣ್ಣು ಹಾಕಿದ್ದರು. ಆ ದಿನ ರಾತ್ರಿ ಮಹಿಳೆ ವಾಸವಿದ್ದ ಮನೆ ಬಳಿ ಬಂದ ಮನೋಜ ಸೈಲ್ ಹಿಂದಿನ ಬಾಗಿಲು ಬಡಿದಿದ್ದರು. ಮಹಿಳೆ ಬಾಗಿಲು ತೆರೆದಾಗ ಅವರ ಕೈ ಹಿಡಿದು ಎಳೆದಿದ್ದರು. ಮಹಿಳೆ ಮೈಮೇಲಿದ್ದ ಬಟ್ಟೆಯನ್ನು ಹರಿದಿದ್ದರು. ಜೊತೆಗೆ ಮಹಿಳೆಗೆ ಗಾಯಪಡಿಸಿ ನೋವುಂಟು ಮಾಡಿದ್ದರು. ಈ ಹಿನ್ನಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2025ರ ಸೆ 29ರಂದು ಈ ಪ್ರಕರಣ ವಿಚಾರಣೆಗೆ ಬಂದಿತು. ನ್ಯಾಯವಾದಿ ವೆಂಕಟೇಶ ಗೌಡ ಅವರು ಮಹಿಳೆ ಪರ ವಾದ ಮಂಡಿಸಿದರು. ನ್ಯಾಯಾಧೀಶ ಧನರಾಜ ಎಸ್ ಎಂ ಅವರು ಆ ವಾದ ಆಲಿಸಿ ಸಾಕ್ಷಿಗಳ ವಿಚಾರಣೆ ನಡೆಸಿದರು. ಚಿತ್ತಾಕುಲ ಪಿಎಸ್‌ಐ ಪರಶುರಾಮ ಮಿರ್ಚಗಿ, ಪಿಎಸ್‌ಐ ನರಸಿಂಹಲು, ಸಂತೋಷ ನಾಯ್ಕ, ಪೊಲೀಸ್ ಸಿಬ್ಬಂದಿ ರಫಿಕ್ ಮುಲ್ಲಾ, ಶ್ರೀಕಾಂತ ನಾಯ್ಕ, ಆಂಜಿನೇಯ ಎಚ್ ಕೆ
ಗಣೇಶ ನಾಯ್ಕ ಇನ್ನಿತರರು ವಿವಿಧ ದಾಖಲೆಗಳನ್ನು ಹಾಜರುಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಧನರಾಜ ಎಸ್ ಎಂ ಅವರು ಆರೋಪಿ ಮನೋಜ ಸೈಲ್’ಗೆ 1 ವರ್ಷ ಜೈಲು ಶಿಕ್ಷೆ ಜೊತೆ 8 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸಲು ಶ್ರಮಿಸಿದ ಅಧೀನ ಅಧಿಕಾರಿ-ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕ ದೀಪನ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಡಿವೈಎಸ್ಪಿ ಎಸ್ ವಿ ಗಿರೀಶ ಹಾಗೂ ಸಿಪಿಐ ಪ್ರಕಾಶ ದೇವಾಡಿಗ ಅವರು ಅಭಿನಂದಿಸಿದರು.

ಇದನ್ನೂ ಓದಿ: ಹೆಲ್ಮೆಟ್ ಧರಿಸೋಣ-ಜೀವ ಉಳಿಸೋಣ: ಕಾರವಾರದಲ್ಲಿ ಪೊಲೀಸರಿಂದ ಜಾಗೃತಿ ಬೈಕ್ ರ‍್ಯಾಲಿ