ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯಾದ್ಯಂತ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ವರ್ಗಾವಣೆ ಗೊಂದಲ ಮುಂದುವರಿದಿದೆ. ಜಿಲ್ಲೆಯ ಹಲವು ಠಾಣೆಗಳಲ್ಲಿ ನಿಯಮಾನುಸಾರ ಸೇವೆ ಸಲ್ಲಿಸುತ್ತಿದ್ದ ಅಮಾಯಕ ಸಿಬ್ಬಂದಿ ವರ್ಗಾವಣೆಗೆ ಒಳಗಾಗುತ್ತಿರುವುದರಿಂದ ಅಸಮಾಧಾನ ಹೆಚ್ಚುತ್ತಿದೆ. ಮತ್ತೊಂದೆಡೆ, ವಾಮಮಾರ್ಗ ಬಳಸಿಕೊಂಡು ಬಂದ ಕೆಲವರು ಹಾಗೆಯೇ ಠಾಣೆಗಳಲ್ಲಿ ಉಳಿದುಕೊಂಡಿರುವುದು ಗಂಭೀರ ಆರೋಪಕ್ಕೆ ಕಾರಣವಾಗಿದೆ.

ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (HRMS) ತಾಂತ್ರಿಕ ತೊಂದರೆ ಪರಿಹರಿಸಲು ಜಿಲ್ಲೆಯಲ್ಲಿ ಇನ್ನಷ್ಟು ವರ್ಗಾವಣೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.. ಆದರೆ ವಾಸ್ತವದಲ್ಲಿ ವಾಮಮಾರ್ಗ ಬಳಸಿ ಬಂದವರನ್ನು ಬಿಟ್ಟು, ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಮಾತ್ರ ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೆಲ ಸಿಬ್ಬಂದಿ ವಕಯದಿಂದ ಕೇಳಿರುತ್ತಿದೆ.

ಮೂಲಗಳ ಪ್ರಕಾರ, ಈ ಹಿಂದೆ ವರ್ಗಾವಣೆ ಸಮಯದಲ್ಲಿ ಕೆಲವರು, ಅಧಿಕಾರಿಗಳ ಪ್ರಭಾವ, ರಾಜಕೀಯ ಬೆಂಬಲ ಮುಂತಾದ ವಾಮಮಾರ್ಗಗಳನ್ನು ಬಳಸಿಕೊಂಡು ತಮ್ಮ ಇಷ್ಟದ ಠಾಣೆಗಳಲ್ಲಿ ಜಾಗ ಪಡೆದುಕೊಂಡಿದ್ದಾರೆ. ಮಂಜೂರಾತಿ ಸಾಮರ್ಥ್ಯ ಈಗಾಗಲೇ ತುಂಬಿದ್ದರೂ, ಇಂತಹವರಿಗೆ ಹೇಗೆ ಆದೇಶ ನೀಡಲಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಿರ್ಧಾರದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಪದೆ ಪದೆ ಒಂದೇ ಠಾಣೆಗೆ ಮರಳುವ ಪದ್ಧತಿ
ಕೆಲವರು ಒಂದೇ ಠಾಣೆಗೆ ಪದೇಪದೇ ಮರಳುತ್ತಿದ್ದಾರೆ. ಕೆಲವರು ಒಂದೇ ದಿನ, ಕೆಲವರು ಒಂದು ವಾರ, ಒಂದು ತಿಂಗಳು ಅಥವಾ ಐದು-ಹತ್ತು ವರ್ಷಗಳಲ್ಲಿಯೇ ಮತ್ತೆ ಹಳೆಯ ಠಾಣೆಗೆ ಹಿಂತಿರುಗಿದ್ದಾರೆ. ಇದಕ್ಕೆ ಹಿಂದಿನಲ್ಲೂ ಅಧಿಕಾರ, ಹಣ ಅಥವಾ ರಾಜಕೀಯ ಪ್ರಭಾವವೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವರು ನಿರ್ದಿಷ್ಟ ಠಾಣೆಗಳಲ್ಲಿ ದೀರ್ಘಕಾಲ ಉಳಿದುಕೊಂಡು, ವ್ಯವಹಾರ, ರೆಸಾರ್ಟ್, ಲಾಡ್ಜ್, ಭೂ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಕೂಡ ಸಿಬ್ಬಂದಿ ವಲಯದಲ್ಲಿ ಹರಿದಾಡುತ್ತಿದೆ. ಇಂತಹವರನ್ನು ಬದಲಾವಣೆ ಮಾಡುವ ಬದಲು, ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವವರನ್ನೇ ವರ್ಗಾವಣೆ ಮಾಡುತ್ತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಬೇಡಿಕೆಯ ಪ್ರಕಾರ ನ್ಯಾಯಸಮ್ಮತ ವರ್ಗಾವಣೆ ಜಾರಿಯಾಗಬೇಕು. ವಾಮಮಾರ್ಗ ಬಳಸಿ ಬಂದವರನ್ನೇ ಬದಲಾವಣೆ ಮಾಡಬೇಕು. ಸೇವಾ ಹಿರಿತನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಅನ್ಯಾಯವಾಗಬಾರದು.ಅಮಾಯಕರ ಮಕ್ಕಳ ಶಿಕ್ಷಣದ ಹಿತಾಸಕ್ತಿಗೆ ಧಕ್ಕೆ ಆಗದಂತಿರಬೇಕು ಎನ್ನುವ ಮಾತು ಕೇಳಿ ಬರುತ್ತಿದೆ..

ಪೊಲೀಸ್ ಅಧೀಕ್ಷಕರು ಹೊಸಬರಾದರೂ ದಕ್ಷರಾಗಿದ್ದಾರೆ, ವಾಮಮಾರ್ಗ ಬಳಸಿಕೊಂಡು ಬಂದವರನ್ನೇ ವರ್ಗಾವಣೆ ಮಾಡಿ, ಇತರರಿಗೆ ಪಾಠ ಕಲಿಸುವುದು ಅಗತ್ಯವೆಂದು ಸಿಬ್ಬಂದಿ ವಲಯದಲ್ಲಿನ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಾಮಮಾರ್ಗದ ಆಧಾರದ ಮೇಲೆ ವರ್ಗಾವಣೆ ಪಡೆಯಲು ಪ್ರಯತ್ನಿಸುವವರಿಗೂ ತಡೆಹಿಡಿಯುವಂತಾಗಬೇಕಿದೆ..

ಇದನ್ನೂ ಓದಿ : ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಹೈಕೋರ್ಟ್ ತಡೆ