ಸುದ್ದಿಬಿಂದು ಬ್ಯೂರೋ ವರದಿ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ವಿರುದ್ಧ ಲವ್ ಜಿಹಾದ್ ಆರೋಪ ಮಾಡಲಾಗಿದ್ದ ಪ್ರಕರಣಕ್ಕೆ ಮುಕಳೆಪ್ಪನ ಪತ್ನಿ ದೀಪಾ ಕರಮಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಇದು ಲವ್ ಜಿಹಾದ್ ಅಲ್ಲ ಅಂತಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ದೀಪಾ, “ನನ್ನ ಗಂಡನ ವಿರುದ್ಧ ಮಾಡಲಾಗುತ್ತಿರುವ ಲವ್ ಜಿಹಾದ್ ಆರೋಪಗಳು ಸಂಪೂರ್ಣ ಸುಳ್ಳು. ನಾವು ಇಬ್ಬರು ಪ್ರೀತಿಸಿ, ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆ. ಯಾರೂ ನನ್ನನ್ನು ಮೈಂಡ್ ವಾಶ್ ಮಾಡಿಲ್ಲ. ನಮ್ಮ ಮದುವೆಯ ಬಳಿಕ ನನ್ನ ತಾಯಿಯೇ ನಮಗೆ ಬೆಂಬಲ ನೀಡಿದ್ದಾರೆ, ಅದಕ್ಕೆ ಬೇಕಾದ ಸಾಕ್ಷಿಗಳು ನನ್ನ ಬಳಿ ಇವೆ. ಅವನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ.

ತನ್ನ ಹೆತ್ತವರ ನಡೆಗೆ ಬೇಸರ ವ್ಯಕ್ತಪಡಿಸಿದ ದೀಪಾ, “ನಮ್ಮ ತಾಯಿ-ತಂದೆ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರ ಮೂಲಕ ಸುಳ್ಳು ಹೇಳಿಕೆಗಳನ್ನು ಹರಡಲಾಗುತ್ತಿದೆ. ಅವರ ಮಾತುಗಳನ್ನು ನಂಬಬಾರದು,” ಎಂದು ಮನವಿ ಮಾಡಿದ್ದಾರೆ.”ನನ್ನಿಗಾಗಲಿ, ನನ್ನ ಗಂಡನಿಗೆ  ಏನಾದರೂ ಅಪಾಯ ಸಂಭವಿಸಿದರೆ, ಕಾನೂನಿನಿಂದ ನಮಗೆ ನ್ಯಾಯ ದೊರಕಬೇಕು,” ಎಂದು ದೀಪಾ ವಿಡಿಯೋದಲ್ಲಿ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮೂಲದ ದೀಪಾ ಕರಮಡಿ, ಜೂನ್ 5 ರಂದು ಮುಕಳೆಪ್ಪನನ್ನು ವಿವಾಹವಾಗಿದ್ದರು. ಮದುವೆಯನ್ನು ಉಪ ನೋಂದಣಿ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿತ್ತು. ಆದರೆ ಮದುವೆಯ ಬಳಿಕ ದೀಪಾ ಪೋಷಕರು ಮತ್ತು ಬಜರಂಗದಳ ಕಾರ್ಯಕರ್ತರು ಇದನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದರು. ಈ ವಿಡಿಯೋ ಬಿಡುಗಡೆಯ ನಂತರ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಪೊಲೀಸರ ಮುಂದಿನ ಕ್ರಮದತ್ತ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನೂ ಓದಿ : GST 2.0 ಮೋದಿ ಘೋಷಣೆ ರಾಜಕೀಯ ನಾಟಕ: ಸುರಜ್ ಜಿ ನಾಯ್ಕ ಟೀಕೆ