ದೆಹಲಿ: ನಾಳೆಯಿಂದ ದೇಶಾದ್ಯಂತ ಜಿಎಸ್‌ಟಿ 2.0 (GST 2.0) ಜಾರಿಗೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಆರ್ಥಿಕ ಸುಧಾರಣೆಗೆ ದಾರಿ ತೋರಲಿದೆ ಎಂದು ಅವರು ಹೇಳಿದ್ದಾರೆ.

ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾಷಣದ ಆರಂಭದಲ್ಲಿ ದೇಶದ ಜನತೆಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದರು, “ಆತ್ಮನಿರ್ಭರ ಭಾರತದತ್ತ ನಾವು ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ. ನಾಳೆ ಸೂರ್ಯೋದಯದೊಂದಿಗೆ ಹೊಸ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರುತ್ತದೆ,” ಎಂದು ಘೋಷಿಸಿದರು.

ತೆರಿಗೆ ಹಾಗೂ ಸುಂಕಗಳ ಸಂಕೀರ್ಣ ವ್ಯವಸ್ಥೆಯಿಂದಾಗಿ ವ್ಯವಹಾರಿಗಳು ಮತ್ತು ಸಾಮಾನ್ಯ ಜನರು ಎದುರಿಸುತ್ತಿದ್ದ ತೊಂದರೆಗಳಿಗೆ ಜಿಎಸ್‌ಟಿ 2.0 ಪರಿಹಾರವಾಗಲಿದೆ ಎಂದು ಹೇಳಿದರು. “ಈ ಹೊಸ ವ್ಯವಸ್ಥೆಯಿಂದ ವ್ಯವಹಾರ ಪ್ರಕ್ರಿಯೆಗಳು ಸುಲಭಗೊಳ್ಳಲಿವೆ ಹಾಗೂ ಹೂಡಿಕೆಗಳಿಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ,” ಎಂದು ಹೇಳಿದ್ದರು.

ನವರಾತ್ರಿಯ ಮೊದಲ ದಿನದಿಂದಲೇ ಜಿಎಸ್‌ಟಿ ‘ವಸಂತೋತ್ಸವ’ ಆರಂಭವಾಗುವುದಾಗಿ ತಿಳಿಸಿದ ಪ್ರಧಾನಿ ಮೋದಿ, ಮಧ್ಯಮವರ್ಗ, ರೈತರು, ವ್ಯಾಪಾರಿಗಳು, ಉದ್ಯಮಿಗಳು, ಗೃಹಿಣಿಯರು ಹಾಗೂ ಯುವಜನತೆ ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೆ ಇದರ ಲಾಭ ತಲುಪಲಿದೆ ಎಂದು ಭರವಸೆ ನೀಡಿದರು.