ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ರಾಮನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಕಂಡುಬಂದಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸುವಂತೆ ಮಾಡಿದೆ.. ಕಳೆದ 15 ದಿನಗಳಿಂದ ಚಿರತೆ ಗ್ರಾಮದ ಸುತ್ತಮುತ್ತ ಸುತ್ತಾಡುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ತೋರಿಲ್ಲ. ಚಿರತೆ ಮನೆಗಳ ಬಳಿ, ತೋಟ ಪ್ರದೇಶಗಳಲ್ಲಿ ಕಾಣಿಸಿಕೊಂಡು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
“ಇನ್ನು ಒಂದು ದೊಡ್ಡ ಅಪಾಯ ಸಂಭವಿಸುವ ಮೊದಲು ಕ್ರಮ ಕೈಗೊಳ್ಳಬೇಕು,” ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಬೋನಿಗೆ ಸೆರೆಹಿಡಿದು, ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಸ್ಥಳೀಯರು ಈಗ ಭಯಭೀತರಾಗಿದ್ದು, ಮಕ್ಕಳು ಹಾಗೂ ಮಹಿಳೆಯರು ಮನೆಯ ಹೊರಗೆ ಬಿಡುವುದಕ್ಕೂ ಭಯಪಡುವಂತಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮಕ್ಕೆ ಮುಂದಾಗಬೇಕಿದೆ..