ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಧಾರವಾಡದ ಜನಪ್ರಿಯ ಯೂಟ್ಯೂಬರ್ ಕ್ವಾಜಾ ಬಂದೇನ್‌ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಕಾರ್ಯಕರ್ತರ ದೂರಿನ ಪ್ರಕಾರ, ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮೀಯನಾಗಿದ್ದು, ನಕಲಿ ದಾಖಲೆಗಳನ್ನು ಬಳಸಿ ಹಿಂದೂ ಯುವತಿಯೊಂದಿಗೆ ವಿವಾಹವಾಗಿದ್ದಾನೆ ಎಂದು ಹೇಳಿದ್ದಾರೆ. ಈ ವಿವಾಹವನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದು, ಲವ್ ಜಿಹಾದ್‌ಗೆ ಸಂಬಂಧಿಸಿದ ಪ್ರಕರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಿಂದೂ ಯುವತಿಯರನ್ನೇ ಗುರಿ ಮಾಡಿಕೊಂಡ ಆರೋಪ ಬಜರಂಗದಳ ಕಾರ್ಯಕರ್ತರ ಪ್ರಕಾರ,ಮುಕಳೆಪ್ಪ ತನ್ನ ಯೂಟ್ಯೂಬ್ ಶಾರ್ಟ್ ವೀಡಿಯೋಗಳಲ್ಲಿ ಹಿಂದೂ ಯುವತಿಯರನ್ನೇ ಹೆಚ್ಚಿನ ಪ್ರಮಾಣದಲ್ಲಿ ತೋರಿಸುತ್ತಿದ್ದಾನೆ. ಜೊತೆಗೆ, ಹಿಂದೂ ಧರ್ಮ ಮತ್ತು ಆಚರಣೆಗಳಿಗೆ ಅವಮಾನ ಮಾಡುವ ರೀತಿಯ ವಿಷಯಗಳನ್ನು ಪ್ರಕಟಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಕಳೆದ ಜೂನ್ 5ರಂದು ದಾಖಲೆಗಳ ಕೊಟ್ಟ ಆಧಾರದಲ್ಲಿ ಈತ ವಿವಾಹವಾಗಿದ್ದಾನೆ. ಇದರಿಂದ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕಾರ್ಯಕರ್ತರು ಹೇಳಿ, ಮುಕಳೆಪ್ಪ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು, “ಮದುವೆಯಾದ ಯುವತಿಯ ವಿಚಾರಣೆ ನಡೆಯುತ್ತಿದೆ. ಪ್ರಸ್ತುತ ಹಂತದಲ್ಲಿ ನಕಲಿ ದಾಖಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ತನಿಖೆ ನಡೆಸಲು ಪೊಲೀಸ್ ಅಧಿಕಾರಿಯನ್ನು ನೇಮಿಸಿದ್ದೇವೆ,” ಎಂದು ತಿಳಿಸಿದ್ದಾರೆ.

ಬಜರಂಗದಳ ಕಾರ್ಯಕರ್ತರು ಮುಕಳೆಪ್ಪನ ಯೂಟ್ಯೂಬ್ ಚಾನೆಲ್ ಹಾಗೂ ವಿಡಿಯೋಗಳ ಮೇಲೆ ನಿಗಾ ಇಟ್ಟು, ಹಿಂದೂ ಯುವತಿಯರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಶೀಲ ಶಂಕೆಯಿಂದ ಪತಿಯಿಂದ ಪತ್ನಿ ಹತ್ಯೆ : ಕೊಲೆ ರಹಸ್ಯ ಭೇದಿಸಿದ ಚಿತ್ತಾಕುಲ ಪೊಲೀಸರು