ಸುದ್ದಿಬಿಂದು ಬ್ಯೂರೋ ವರದಿ (suddibindu digital news)
ಹಾಸನ : ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿ ಎಂಟಕ್ಕೂ ಹೆಚ್ಚು ಮಂದಿ ದುರ್ಮರಣ ಹೊಂದಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನ ಮತ್ತು ಹೊಳೆನರಸೀಪುರದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಕೆಲ ನಿಮೀಷದ ಹಿಂದೆನಡೆದ ಈ ಘಟನೆ ವೇಳೆ ಗ್ರಾಮದ ಗಣಪತಿ ವಿಸರ್ಜನೆ ಮೆರವಣಿಗೆ ಭಕ್ತರ ಕೂಗಾಟ, ಭಜನೆ, ಪಟಾಕಿ ಸಿಡಿತಗಳಿಂದ ಕಂಗೊಳಿಸುತ್ತಿತ್ತು. ಇದೇ ವೇಳೆ ಹಾಸನದಿಂದ ಹೊಳೆನರಸೀಪುರ ಕಡೆಗೆ ತೆರಳುತ್ತಿದ್ದ ವೇಗದ ಟ್ರಕ್ ಮೆರವಣಿಗೆಯ ದಾರಿಗೆ ಬಂದಿತ್ತು. ಪ್ರಾಥಮಿಕ ಮಾಹಿತಿಯಂತೆ, ಟ್ರಕ್‌ಗೆ ಅಡ್ಡ ಬಂದ ಬೈಕ್ ಸವಾರನನ್ನು ತಪ್ಪಿಸಲು ಪ್ರಯತ್ನಿಸಿದ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮೆರವಣಿಗೆಯೊಳಗೆ ನುಗ್ಗಿದ ಪರಿಣಾಮ ಈ ಭೀಕರ ಅಪಘಾತ ನಡೆದಿದೆ.

ಘಟನೆ ವೇಳೆ ಸ್ಥಳದಲ್ಲೇ ಐವರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಕ್ಕಳು ಹಾಗೂ ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಟ್ರಕ್ ನುಗ್ಗಿದ ಕ್ಷಣ ಸ್ಥಳದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿದ್ದು, ಭಕ್ತರು ಓಡಾಟ, ಅಳಲು, ಸಹಾಯ ಕೂಗಾಟದಿಂದ ಗ್ರಾಮ ದುಃಖ ಸಾಗರವಾಗಿ ಮಾರ್ಪಟ್ಟಿತು. ಮೃತರ ಪೋಷಕರು ಹಾಗೂ ಬಂಧುಗಳು ಮಕ್ಕಳನ್ನು ಕಳೆದುಕೊಂಡು ಆಕ್ರಂದನಗೊಳ್ಳುತ್ತಿದ್ದು, ಘಟನೆ ಸ್ಥಳದಲ್ಲಿ ಕಣ್ಣೀರಿನ ವಾತಾವರಣ ಆವರಿಸಿದೆ.

ಅಪಘಾತದ ತೀವ್ರತೆಯಿಂದ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಕೆಲವು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಆಂಬುಲೆನ್ಸ್‌ಗಳನ್ನು ಕರೆಸಿ ಹಾಸನ ಜಿಲ್ಲಾಸ್ಪತ್ರೆ ಹಾಗೂ ಹೊಳೆನರಸೀಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಹಾಸನ ಶಾಸಕ ಹೆಚ್.ಡಿ. ರೇವಣ್ಣ, ಸಂಸದ ಶ್ರೇಯಸ್ ಪಟೇಲ್, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ರೇವಣ್ಣ ಅವರು ಸ್ಥಳದಲ್ಲಿ ಮಾತನಾಡಿ, ಪೊಲೀಸ್ ಇಲಾಖೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಇರುವುದೇ ಈ ದುರಂತಕ್ಕೆ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
.
“ಇಂತಹ ಮಹತ್ವದ ಮೆರವಣಿಗೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಇರಲಿಲ್ಲ, ಸ್ಥಳದಲ್ಲೇ ಸಾರಿಗೆ ನಿಯಂತ್ರಣ ವೈಫಲ್ಯ ಕಂಡುಬಂದಿದೆ. ಮೃತರ ಕುಟುಂಬಗಳಿಗೆ ಸರ್ಕಾರವು ತಕ್ಷಣ ಪರಿಹಾರ ಘೋಷಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಸಂಸದ ಶ್ರೇಯಸ್ ಪಟೇಲ್ ಅವರು ಮೃತರ ಕುಟುಂಬಗಳಿಗೆ ಸಾಂತ್ವಾನ ನೀಡಿ, ಗಾಯಾಳುಗಳಿಗೆ  ಚಿಕಿತ್ಸೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳ, ಆರೋಗ್ಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ಅಪಘಾತಕ್ಕೆ ಕಾರಣವಾದ ನಿಖರ ಕಾರಣ ಪತ್ತೆಗೆ ಸಮಗ್ರ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಈ ದುರಂತದಿಂದ ಮೊಸಳೆಹೊಸಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಕಸಾಗರ ಆವರಿಸಿದೆ.

Kumta/ಶಾಂತಿಕಾ ಪರಮೇಶ್ವರಿ ದೇವಿಗೆ ಲಕ್ಷಾಂತರ ರೂ ಮೌಲ್ಯದ ಹೂವಿನ ಪೂಜೆ