ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಬೇಲೇಕೇರಿ ಬಂದರಿನಿಂದ ಅಕ್ರಮ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಸೆಪ್ಟೆಂಬರ್ 12ರವರೆಗೆ ಇಡಿ (ED) ಕಸ್ಟಡಿಗೆ ವಹಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಮಂಗಳವಾರ ರಾತ್ರಿ ಇಡಿ ಅಧಿಕಾರಿಗಳಿಂದ ಬಂಧಿತರಾದ ಸೈಲ್ ಅವರನ್ನು ಇಂದು ಬೆಳಿಗ್ಗೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ, ನ್ಯಾಯಾಧೀಶರು ಸೈಲ್ ಅವರನ್ನು ಇನ್ನೂ ಎರಡು ದಿನಗಳ ಕಾಲ ಇಡಿ ವಶಕ್ಕೆ ನೀಡುವಂತೆ ತೀರ್ಪು ನೀಡಿದರು.
ಕಳೆದ ಆಗಸ್ಟ್ 13-14ರಂದು ಇಡಿ ಅಧಿಕಾರಿಗಳು ಕಾರವಾರ ಶಾಸಕ ಸತೀಶ್ ಸೈಲ್ ಅವರ ಕಾರವಾರದ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಬೇಲೇಕೇರಿ ಬಂದರಿನಿಂದ ನಡೆದ ಅಕ್ರಮ ಕಬ್ಬಿಣದ ಅದಿರು ಸಾಗಾಟಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಈ ದಾಳಿ ನಡೆದಿತ್ತು.
ಈ ಪ್ರಕರಣದ ಮೂಲವು 14ವರ್ಷಗಳ ಹಿಂದೆ ನಡೆದಿದ್ದು. ಅಂಕೋಲಾದ ಬೇಲೇಕೇರಿ ಬಂದರಿನಿಂದ ಸಾವಿರಾರು ಟನ್ಗಳಷ್ಟು ಕಬ್ಬಿಣದ ಅದಿರು ನಾಪತ್ತೆಯಾಗಿದ್ದವು. ಈ ಕುರಿತು ನಡೆದ ತನಿಖೆಯಲ್ಲಿ ಸೈಲ್ ಸೇರಿದಂತೆ ಅನೇಕರ ವಿರುದ್ಧ ಆರೋಪ ಹೊರಿಸಲಾಗಿತ್ತು. ಕಳೆದ ವರ್ಷ ಇದೇ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೈಲ್ ಅವರಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಈ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಡಿಕೆಶಿ ಪ್ರತಿಕ್ರಿಯೆ
ಸೈಲ್ ಬಂಧನದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, “ಈ ಬಂಧನದ ಅವಶ್ಯಕತೆ ಇರಲಿಲ್ಲ. ಪ್ರಕರಣ 2010ರಿಂದಲೇ ವಿಚಾರಣೆಯಲ್ಲಿದೆ. ಕಾಂಗ್ರೆಸ್ ಶಾಸಕರನ್ನೇ ಗುರಿಯಾಗಿಸಿ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಕಿರಿಕಿರಿ ಉಂಟುಮಾಡುವ ರಾಜಕೀಯ ಪ್ರಯತ್ನವೇ ಇದು” ಎಂದು ಆರೋಪಿಸಿದ್ದಾರೆ.