ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಮುಂದಿನ ಬಾರಿ 50ನೇ ವರ್ಷದ “ಸುವರ್ಣ ಮಹೋತ್ಸವ” ಆಚರಿಸಲಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡಿಗಾರಗಲ್ಲಿಯವರು ಕಳೆದ 49ವರ್ಷಗಳಿಂದ ಕುಮಟಾದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಿದ್ದು, ಇಲ್ಲಿ ಯಾವುದೇ ಧರ್ಮದ ಭೇದವಿಲ್ಲದೆ ಎಲ್ಲಾ ಧರ್ಮದವರು ಸೇರಿ ಹಬ್ಬದಾಚರಣೆ ಮಾಡುತ್ತಿರುವುದು ವಿಶೇಷವಾಗಿದೆ.
ನಾವೆಲ್ಲ ಭಾರತದ ಮಕ್ಕಳು, ನಮ್ಮಲ್ಲಿ ಬೇಧಭಾವ ಇರಬಾರದು, ಬ್ರಿಟಿಷರ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿರಬೇಕು ಎನ್ನುವ ಕಾರಣಕ್ಕಾಗಿಯೇ ಸ್ವಾತಂತ್ರ್ಯದ ಪೂರ್ವದಲ್ಲಿ ಶ್ರೀಬಾಲಗಂಗಾಧರನಾಥ ತಿಲಕರು “ಸಾರ್ವಜನಿಕ ಗಣೇಶೋತ್ಸವ” ಆಚರಿಸಲು ಕರೆ ನೀಡಿದ್ದರು. ಇದನ್ನು ಗುಡಿಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಅಕ್ಷರಶಃ ಪಾಲಿಸುತ್ತಿದ್ದಾರೆ.
ಗುಡಿಗಾರಗಲ್ಲಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಎಲ್ಲಾ ಧರ್ಮದವರೊಂದಿಗೆ ಸೇರಿ ಒಟ್ಟಾಗಿ ಗಣೇಶೋತ್ಸವ ಆಚರಿಸುವುದರ ಜೊತೆಗೆ ಸಮಾಜ ಸೇವೆಯಲ್ಲೂ ನಿರತರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮುಸ್ಲಿಂ ಸಹೋದರರ “ಈದ್ ಮಿಲಾದ್ ಹಬ್ಬ” ಮತ್ತು ಹಿಂದೂ ಸಹೋದರರ “ಗಣೇಶ ಚತುರ್ಥಿ ಹಬ್ಬ” ಒಟ್ಟೊಟ್ಟಿಗೆ ಬರುತ್ತಿದೆ. ಇದು ಕಾಕತಾಳೀಯ ಅಲ್ಲ, ಧಾರ್ಮಿಕ ಸಹೋದರತೆಯ ಸಮ್ಮಿಲನ ಎನ್ನುವುದು ಅನೇಕರ ನಂಬಿಕೆಯಾಗಿದೆ.
ಕಳೆದ ವರ್ಷ ಈದ್ ಪ್ರಯುಕ್ತ ಮುಸ್ಲಿಂ ಸಹೋದರರು ಮೆರವಣಿಗೆ ಹೊರಟಾಗ ಗುಡಿಗಾರಗಲ್ಲಿ ಬಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮತ್ತು ಸಮಾನ ಮನಸ್ಕರೆಲ್ಲ ಸೇರಿ ಸಿಹಿ ತಿಂಡಿ ಮತ್ತು ತಂಪು ಪಾನೀಯ ನೀಡಿ “ನಾವೆಲ್ಲ ಸಹೋದರರು” ಎಂದು ಸಾರಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಹೋದರರು ಸೇರಿ ಗುಡಿಗಾರಗಲ್ಲಿಯ ಗಣೇಶನ ವಿಸರ್ಜನೆಯ ದಿನ ಸಂಜೆ ನೆರೆದ ಸಾವಿರಾರು ಮಂದಿಗೆ ಬಿಸಿ ಬಿಸಿ ಸಮೋಸಾ ನೀಡಿ ಸಹೋದರತೆ ಬೆಸೆದಿದ್ದರು.
ಈ ಬಾರಿಯೂ ಈದ್ ಮಿಲಾದ್ ಹಬ್ಬ ಗಣೇಶ ಚತುರ್ಥಿ ಹಬ್ಬದ ಸಂದರ್ಭವೇ ಬಂದಿದ್ದು, ಶುಕ್ರವಾರ, ಸೆಪ್ಟಂಬರ್ 5ರಂದು ಮುಸ್ಲಿಂ ಸಹೋದರರು ಬೆಳಿಗ್ಗೆ ಮೆರವಣಿಗೆ ಹೊರಟಾಗ ಗುಡಿಗಾರಗಲ್ಲಿ ಬಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು, ಸಮಾನ ಮನಸ್ಕ ಗೆಳೆಯರು ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳ ಅನುಯಾಯಿಗಳೆಲ್ಲ ಸೇರಿ ಸಿಹಿ ತಿಂಡಿ, ತಂಪು ಪಾನೀಯ ವಿತರಿಸುವ ಮೂಲಕ ಹಿಂದು-ಮುಸ್ಲಿಂ ಸಮ್ಮಿಲನಕ್ಕೆ ಸಾಕ್ಷಿಯಾದರು. ಇದೇ ಸಂದರ್ಭ ಮುಸ್ಲಿಂ ಸಹೋದರರು ತಾವು ತಂದ ಬೂಂದಿ ಲಾಡುಗಳನ್ನು ಹಾಗೂ ಗುಲಾಬಿ ಹೂವಿನ ಬೃಹತ್ ಹಾರವನ್ನು ಗಣಪತಿಗೆ ಅರ್ಪಿಸಿದರು. ಸಮಿತಿಯವರು ಮುಸ್ಲಿಂ ಸಹೋದರರಿಗೆ ಹೂವು, ಹಣ್ಣು, ಕಾಯಿಗಳಿದ್ದ ಗಣಪತಿಯ ಪ್ರಸಾದ ನೀಡಿ ನಮ್ಮ ಸಹೋದರತೆಯ ಬ್ರಾತತ್ವ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.
ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾದೇವ ನಾಯ್ಕ, ದೇವರಹಕ್ಕಲ್ ಇವರು ಮಾಧ್ಯಮದೊಂದಿಗೆ ಮಾತನಾಡಿ, “ನಮ್ಮಲ್ಲಿ ಯಾವುದೇ ಧರ್ಮ ಭೇದವಿಲ್ಲ, ನಾವೆಲ್ಲ ಈ ನೆಲದ ಮಕ್ಕಳು, ಸಹೋದರರು ಎನ್ನುವುದು ನಮ್ಮೆಲ್ಲರ ಭಾವನೆ. “ಸಂಘಟನ್ ಮೇ ಶಕ್ತಿ ಹೈ” ಎನ್ನುವ ಘೋಷವಾಕ್ಯದಡಿ ನಾವೆಲ್ಲ ಕಾರ್ಯನಿರ್ವಹಿಸುತ್ತಿದ್ದೇವೆ. ಹಿಂದೆ ಅನೇಕ ಮುಸ್ಲಿಂ, ಕ್ರಿಶ್ಚಿಯನ್ ಸಹೋದರರು ನಮ್ಮ ಸಮಿತಿಯಲ್ಲಿದ್ದರು. ಅವರು ಯಾವತ್ತೂ ನಮಗೆ ಸಹಕಾರ ನೀಡುತ್ತಲೇ ಬಂದಿದ್ದಾರೆ. ಮುಂದಿನ ಬಾರಿ ನಾವು ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ನಮಗೆ ಎಲ್ಲರ ಸಹಾಯ ಸಹಕಾರವೂ ಬೇಕು. ಹರಕೆ ಗಣಪತಿ ಎಂದೇ ಖ್ಯಾತನಾದ ಗುಡಿಗಾರಗಲ್ಲಿಯ ಶ್ರೀ ವಿಘ್ನವಿನಾಶಕ ಎಲ್ಲರಿಗೂ ಒಳಿತು ಮಾಡಲಿ” ಎಂದರು.
ಈ ಸಂದರ್ಭ ದೇವರಹಕ್ಕಲದ ಮಂಜುನಾಥ ಸುರೇಶ ನಾಯ್ಕ, ರಾಜೇಶ ರಾಮ ನಾಯ್ಕ, ರಾಮ ಮಾದೇವ ನಾಯ್ಕ, ವಸಂತ ವೆಂಕಟೇಶ ನಾಯ್ಕ, ರಾಘವೇಂದ್ರ ಉಮೇಶ ನಾಯ್ಕ, ಗಿರೀಶ ದಯಾನಂದ ನಾಯ್ಕ, ಮಂಜುನಾಥ ಭರತ ನಾಯ್ಕ, ಬಾಲರಾಜ ಭರತ ನಾಯ್ಕ, ಸುಕುಮಾರ ಮಂಜುನಾಥ ನಾಯ್ಕ, ಅನಿಲ ಭಂಡಾರಿ, ಕೇತನ್ ಗಣಪತಿ ಭಂಡಾರಿ, ದಯಾನಂದ ಧಾರೇಶ್ವರ, ಶ್ರೀಧರ ಕುಮಟಾಕರ್ ಮತ್ತು ಕುಮಟಾ ಪಟ್ಟಣದ ರಾಘವೇಂದ್ರ ಈಶ್ವರ ನಾಯ್ಕ, ಪ್ರಥ್ವಿರಾಜ್ ಹರಿ ನಾಯ್ಕ, ಪ್ರಾತೇಶ ನಂಬಿಯಾರ್, ವಿವೇಕ ನಾಯ್ಕ, ವಕ್ಕನಹಳ್ಳಿಯ ಗುರು ನಾಯ್ಕ ಮತ್ತಿತರರು ಇದ್ದರು.
ಇದನ್ನೂ ಓದಿ: ಆಟವಾಡುವಾಗ ಎಯರ್ ಗನ್ ದುರಂತ: ತಮ್ಮನ ಗುಂಡಿಗೆ 9ವರ್ಷದ ಅಣ್ಣನ ದುರ್ಮರಣ