ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಾಣಿಜ್ಯ ಬಂದರು ವಿಚಾರ ಸಂಬಂಧ ಅಂಕೋಲಾದಲ್ಲಿ ನಡೆದ ಅಹವಾಲು ಸಭೆಯಲ್ಲಿ  ಹಾಲಕ್ಕಿ ಮೀನುಗಾರ ಸಮುದಾಯ ಮತ್ತು ರೈತರ ಪರವಾಗಿ ಆಹವಾಲು ಸಲ್ಲಿಸಲು ಹೋದಾಗ ಆಹವಾಲು ಸಲ್ಲಿಸಲು ಅವಕಾಶ ನೀಡದೇ ಕೆಲವರು ದಬ್ಬಾಳಿಕೆ ಮಾಡಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು  ಗ್ರೀನ್ ಇಂಡಿಯಾ ಸಂಸ್ಥೆ, ಪರಿಸರ ಸಂರಕ್ಷಣಾ ಸಂಸ್ಥೆ, ಜಿಲ್ಲಾ ಬುಡಕಟ್ಟು ಕುಣಬಿ ಸಮಾಜ ಮತ್ತು ಸಿದ್ಧಿ ಬುಡಕಟ್ಟು ಸಮಾಜ ಸಂಘಟನೆ ಪ್ರಮುಖರು ಜಂಟಿಯಾಗಿ  ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಗ್ರೀನ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಿ.ಪಿ.ಮಹೇಂದ್ರ ಕುಮಾರ್, ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ,ಡಮಾಮಿ ಸಿದ್ದಿ ಮಹಿಳೆಯರ ಸಮಗ್ರ ಅಭಿವೃದ್ಧಿ ಸಂಸ್ಥೆಯ ಜೂಲಿಯಾನ‌ ಫರ್ನಾಂಡೀಸ್ ಅವರು ಮಾತನಾಡಿ, ನಾವೆಲ್ಲಾ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸ್ಥಳೀಯ ಹಾಲಕ್ಕಿ, ಮೀನುಗಾರರು ಮತ್ತು ರೈತರ ಪರವಾಗಿ ಅಹವಾಲು ಸಲ್ಲಿಸಲು ಹೋದಂತಹ ಸಂದರ್ಭದಲ್ಲಿ, ನಮ್ಮಗೆ ಅಹವಾಲು ಸಲ್ಲಿಸಲು ಅವಕಾಶ ನೀಡದೇ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಗೂಂಡಾ ವರ್ತನೆ ತೋರಿರುವುದು ತೀವ್ರ ಖಂಡನೀಯ.

ಸ್ವತ: ಸಹಾಯಕ ಆಯುಕ್ತರೇ ನೀವು ಇಲ್ಲಿ ಇದ್ದರೇ ಸಮಸ್ಯೆ ಸೃಷ್ಟಿಯಾಗಬಹುದು, ನೀವಿಲ್ಲಿರುವುದು ಬೇಡ ಹೋಗಿ ಎಂದು ಹೇಳಿದರು. ಒಂದು ಯೋಜನೆಯ ಬಗ್ಗೆ ಸಾರ್ವಜನಿಕ ಆಹವಾಲು ಸಭೆಗೆ ಕರೆದಾಗ ಆಹವಾಲು ಸಲ್ಲಿಸಲು ಎಲ್ಲರಿಗೂ ಅವಕಾಶ ನೀಡಬೇಕು. ಆದರೆ ಅಲ್ಲಿ ಏನೋ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣ ಸಂಸ್ಥೆಯ ಕೃಷ್ಣಾ ಪಾಟೀಲ್, ಸಮಾಜದ ಪ್ರಮುಖರಾದ ಪ್ರಸನ್ನ ಗಾವಡಾ, ಅಮ್ಚೆ ಮೋಳ್ ಸಿದ್ದಿ ಕಲಾ ತಂಡದ ಅಧ್ಯಕ್ಷೆ ಸೋಬಿನಾ ಮೋತೇಶ ಕಾಂಬ್ರೇಕರ, ಬುಡಕಟ್ಟು ಹಿತರಕ್ಷಣಾ ವೇದಿಕೆಯ ಶೆರೀಪ್ ಮುಜಾವರ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೂಸುಕುಧಾರಿಯ ಅಸಲಿ ಮುಖವಾಡ ಬಯಲು : 10 ದಿನ ಎಸ್‌ಐಟಿ ಕಸ್ಟಡಿಗೆ