ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ ವಾಣಿಜ್ಯ ಬಂದರು ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಅಹವಾಲು ಸಭೆ, ರಾಜಕೀಯ ಮುಖಂಡರ ಹಪಾಹಪಿತನಕ್ಕೆ ಹಾಗೂ ಡೊಂಗಿ ಪರಿಸರವಾದಿಗಳಿಗೆ ವೇದಿಕೆ ಆಯತ್ತಾ ಎನ್ನುವ ಚರ್ಚೆಗಳು ಈಗ ಆರಂಭವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ JSWಕಂಪನಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಂದರು ವಿಚಾರಕ್ಕೆ ಸಂಬಂಧಿಸಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ, ಯೋಜನೆ ವಿರುದ್ಧ ಆರಂಭದ ದಿನದಿಂದ ರೋಷಾವೇಶದ ಹೋರಾಟ ನಡೆಸಿದ ಬಹುತೇಕ ಹೋರಾಟಗಾರರು ಇಂದಿನ ಸಭೆಯಲ್ಲಿ ಯಾಕೆ ಮೌನ ಆದರು, ಇನ್ನೂ ಕೆಲವರು ಸಭೆಯತ್ತ ಸ್ಥಳದತ್ತವೂ ಸುಳಿಯದೆ ನಾಪತ್ತೆಯಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ.
ಸಭೆ ಆರಂಭವಾದ ಕ್ಷಣದಿಂದಲೇ ಕೇಣಿ ಗ್ರಾಮದವರಿಗಿಂತ ಹೆಚ್ಚಾಗಿ ಹೊರಗಿನ ಜನರು ಈ ಸಭೆಯನ್ನು ಸಂಪೂರ್ಣವಾಗಿ ತಮ್ಮ ಹತ್ತೋಟಿಗೆ ತೆಗೆದುಕೊಂಡು ಮಾತನಾಡಿದ್ದಾರೆ, ನಿಜಕ್ಕೂ ಈ ಸಭೆಯಲ್ಲಿ ಮಾತಾಡಬೇಕಾಗಿದ್ದವರು ಯೋಜನೆಯಿಂದ ನಿರಾಶ್ರಿತರಾಗುತ್ತೇವೆ ಎಂಬ ಆತಂಕದಲ್ಲಿರುವ ಸ್ಥಳೀಯ ಜನರು. ಯಾಕೆಂದರೆ ಈ ಸಭೆಯಲ್ಲಿ ಕಂಪನಿಯ ಅಧಿಕಾರಿಗಳು ಹಾಜರಿದ್ದರು. ಅವರ ಎದುರು ಸ್ಥಳೀಯರಿಗೆ ಪ್ರಶ್ನೆ ಮಾಡಲು ಸಾಕಷ್ಟು ವಿಷಯಗಳು ಇವೆ. ಆದರೆ ಇಲ್ಲಿ ಅದ್ಯಾವುದೂ ನಡೆದಿಲ್ಲ. ಬೇರೆ ಬೇರೆ ಸಂಘಟನೆಗಳ ಹಾಗೂ ರಾಜಕೀಯ ಮುಖಂಡರೇ ಗಂಟೆಗಟ್ಟಲೆ ಮಾತನಾಡಿ ಈ ಯೋಜನೆಗೆ ತಮ್ಮ ವಿರೋಧ ಎಂದು ಹೇಳಿ ಸಭೆಯಲ್ಲಿದ್ದ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಪ್ರಜ್ಞಾವಂತರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ, ಶಿರಸಿ, ಕಾರವಾರ ಜೊತೆಗೆ ಪಕ್ಕದ ಗೋವಾದಲ್ಲಿ ನೆಲೆಸಿರುವವರು ಕೂಡ ಯೋಜನೆ ವಿರುದ್ಧ ಮಾತನಾಡುವ ಮೂಲಕ ಸ್ಥಳೀಯರಿಗೆ ಅವಕಾಶ ನೀಡದಂತೆ ಮಾಡಿರುವುದು ಕಂಡು ಬಂದಿದೆ.
ಯೋಜನೆ ವಿರುದ್ದ ಮಾತನಾಡಿದ ಬಹುತೇಕ ಜನರು ಹೊರಗಿನಿಂದ ಬಂದವರೇ ಎನ್ನುವುದು ಸಭೆಯಲ್ಲಿದ್ದ ಎಲ್ಲರಿಗೂ ತಿಳಿದ ವಿಚಾರ ಎನ್ನಲಾಗಿದೆ. ಅದಲ್ಲದೆ ಯೋಜನೆ ಕುರಿತಾಗಿ ಮಾತನಾಡಬೇಕೆಂದು ಬಂದ ಹೆಚ್ಚಿನ ಜನರನ್ನ ತಡೆ ಒಡ್ಡಿದ ಪ್ರಸಂಗ ಸಹ ನಡೆದಿದೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಇರುವಾಗ, ತಾವು ಮಾತ್ರ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ಉಳಿದವರಿಗೆ ಅವಕಾಶ ನೀಡದಿರುವುದು ಎಷ್ಟು ಸರಿಯೆಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಇವರೆಲ್ಲಾ ಈ ರೀತಿ ಮಾಡಿರುವ ಹಿಂದಿನ ಉದ್ದೇಶ ಏನಿರಬಹುದು ಎನ್ನುವುದು ಕೂಡ ಚರ್ಚೆಯ ವಿಷಯವಾಗಿದೆ..
ಇದನ್ನೂ ಓದಿ:ಬೆಂಕಿ ಅವಘಡ,ಮನೆಗೆ ಹಾನಿ : ಕುಟುಂಬಸ್ಥರಿಗೆ ಧನಸಹಾಯ ಮಾಡಿದ ಅನಂತಮೂರ್ತಿ