ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಯಾರ ಬಗ್ಗೆಯೂ ಸಂಶಯ, ತಾಸ್ಸಾರ ಭಾವ ವ್ಯಕ್ತಪಡಿಸದೇ ಗುರು ಸಂದೇಶವನ್ನು ಜೀವನದಲ್ಲಿ ರೂಢಿಸಿಕೊಳ್ಳುವಂತೆ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಕರೆ ನೀಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಕೈಗೊಂಡ 42 ದಿನಗಳ ಚಾತುರ್ಮಾಸ್ಯ ವ್ರತಾಚರಣೆಯನ್ನು ಪೂರೈಸಿ, ಸೀಮೋಲ್ಲಂಘನೆ ಕಾರ್ಯಕ್ರಮದಲ್ಲಿ ದೀವಗಿಯ ಅಘನಾಶಿನಿ ನದಿಗೆ ಪೂಜೆ ಸಲ್ಲಿಸಿ, ಶ್ರೀರಮಾನಂದ ಸ್ವಾಮೀಗಳ ಮಠದಲ್ಲಿರುವ ಶ್ರೀಹನುಮಂತ ದೇವನಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಕೋನಳ್ಳಿಯ ಶ್ರೀ ವನದುರ್ಗೆ ದೇವಿಯ ಎದುರು ಪ್ರತಿನಿತ್ಯ ಆಧ್ಯಾತ್ಮೀಕ ಯಜ್ಞಗಳನ್ನು ನಡೆಸಿದ್ದೇವೆ. ಅದಕ್ಕೆ ಎಲ್ಲ ಭಕ್ತರು ಹವೀಸನ್ನು ನೀಡುವ ಮೂಲಕ ಇಂದು ಮಹಾ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿದೆ.

ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಾವು ನಡೆಸಿದ ಆರು ವರ್ಷಗಳ ಚಾತುರ್ಮಾಸ್ಯದಲ್ಲಿ ಕೋನಳ್ಳಿಯಲ್ಲಿ ನಡೆದ ಚಾತುರ್ಮಾಸ್ಯ ಅತ್ಯುದ್ಭುತವಾಗಿ ನಡೆಯುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಿದೆ. ನಾಮಧಾರಿ ಸಮಾಜ ಒಗ್ಗಟ್ಟಿನಿಂದ ಇತರೆ ಸಮುದಾಯಗಳನ್ನು ಕೂಡ ಒಗ್ಗೂಡಿಸಿಕೊಂಡು ಪ್ರೀತಿ-ವಿಶ್ವಾಸದಿಂದ ಅವರನ್ನು ಈ ಚಾತುರ್ಮಾಸ್ಯಕ್ಕೆ ಆಹ್ವಾನಿಸಿ, ಸತ್ಕರಿಸಿದ ರೀತಿ ಎಲ್ಲ ಸಮುದಾಯಗಳಲ್ಲೂ ಸಹೋದರತೆಯ ಭಾವ ಮೂಡಿದೆ. ಇದೇ ಚಾತುರ್ಮಾಸ್ಯದ ಮೂಲ ಉದ್ದೇಶವಾಗಿದೆ. ಸಮಾಜದಲ್ಲಿ ಒಗ್ಗಟ್ಟು ಮೂಡಿಸಿ, ಧಾರ್ಮಿಕ ಜಾಗೃತಿಗೊಳಿಸುವುದೇ ನಮ್ಮಂತ ಸನ್ಯಾಸಿಗಳ ಕೈಕಂರ್ಯವಾಗಿದೆ. ನೀವು ನಿಮ್ಮ ಕರ್ತವ್ಯದಿಂದ ಗುರುವಿನ ಮನಸಿನ ಅಂತರಾಳಕ್ಕೆ ಮುಟ್ಟಿಸಬೇಕು. ಅಂತ ಶ್ರದ್ಧೆಯನ್ನು ರೂಢಿಸಿಕೊಂಡರೆ ಭಕ್ತರಿಗೆ ಎದುರಾದ ಕಷ್ಟಗಳು ಸ್ವಾಮಿಗಳಿಗೆ ಅರಿವಾಗುತ್ತದೆ. ಸ್ವಾಮಿ ಅವರ ಕಷ್ಟ ನಿವಾರಣೆಗಾಗಿ ಧ್ಯಾನಕ್ಕೆ ಕೂರುವಂತೆ ಮಾಡುವ ಸ್ವಾಮಿ ನಿಷ್ಠೆಯನ್ನು ನೀವೆಲ್ಲ ರೂಢಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಹರೀಶ ಪುಂಜಾ ಮತ್ತು ಗುಜರಾತಿನಲ್ಲಿರುವ ಗುರುಗಳ ಆಪ್ತ ಶಿಷ್ಯನ ಉದಾಹರಣೆಯನ್ನು ಪ್ರಸ್ತಾಪಿಸುವ ಮೂಲಕ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿದರು.

ನಾವು ಮಾಡಿದ ಮಠ ಭಕ್ತರದ್ದು, ಜನಕಲ್ಯಾಣಕ್ಕಿರುವ ಈ ಮಠಗಳ ಮೂಲಕವೇ ಸಾಮಾಜಿಕ ವ್ಯವಸ್ಥೆಯಲ್ಲಿ ಸಂದೇಶ ಬಿತ್ತರಿಸುವ ಕಾರ್ಯ ಮಾಡುತ್ತೇವೆ. ನಾವು ಕೊಟ್ಟ ಸಂದೇಶ ಮನಸ್ಸಿನ ಅಭಿವೃದ್ಧಿಗೆ ಪೂರಕ. ಇದರಿಂದ ಬದುಕು ಉದ್ದಾರವಾಗುತ್ತದೆ. ಈ ಚಾತುರ್ಮಾಸ್ಯದ ಪುಣ್ಯದ ಫಲ ಎಲ್ಲ ಸದ್ಭಕ್ತರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಾಪ್ತವಾಗಲಿ ಎಂದು ನನ್ನ ಆರಾಧ್ಯದೇವನಲ್ಲಿ ಪ್ರಾರ್ಥಿಸುತ್ತೇನೆ. ನಾಮಧಾರಿ ಸಮಾಜ ಆಧ್ಯಾತ್ಮಿಕ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿ ಇತರೆ ಸಣ್ಣಪುಟ್ಟ ಸಮಾಜಗಳಿಗೂ ಆಸರೆಯಾಗಲಿ ಎಂದು ಶ್ರೀಗಳು ಹಾರೈಸಿದರು.

ಹರಿದ್ವಾರ ಮಠದ ಶ್ರೀ ದೇವಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಚಾತುರ್ಮಾಸ್ಯ ವ್ರತಾಚರಣೆ ನೆರವೇರಿದ ಈ ನೆಲ ಮತ್ತು ತಾವುಗಳೆಲ್ಲರೂ ಭ್ಯಾಗ್ಯಶಾಲಿಗಳು. ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರ ಸಾನಿಧ್ಯ ನಿಮಗೆಲ್ಲ ದೊರೆಯುವ ಜೊತೆಗೆ ಅವರ ಅಮೂಲ್ಯವಾದ ಗುರು ಸಂದೇಶವನ್ನು ಕೇಳಿ ನೀವೆಲ್ಲ ಪಾವನರಾಗಿದ್ದೀರಿ. ಮಹಾರಾಜರ ಧಾರ್ಮಿಕ ಸಂದೇಶ ಇಡೀ ದೇಶವಾಪ್ತಿ ಮುಟ್ಟಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕು ಎಂದು ನುಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಕೋನಳ್ಳಿಯಲ್ಲಿ ನಡೆದ ಚಾತುರ್ಮಾಸ್ಯ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆದಿರುವುದು ಖುಷಿಯ ಸಂಗತಿ. ಗುರುಗಳ ಆಶೀರ್ವಾದ, ಮಾರ್ಗದರ್ಶನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ನಮ್ಮ ಗುರುಗಳ ಚಾತುರ್ಮಾಸ್ಯದ ಕಾರ್ಯಕ್ರಮದ ಆರಂಭ ಮತ್ತು ಸಮಾಪ್ತಿಗೆ ನಾನು ಇರಲೇ ಬೇಕು ಎಂದು ಅಧಿವೇಶನ ಬಿಟ್ಟು ಬಂದಿದ್ದೇನೆ. ಗುರುಗಳ ಆದೇಶವನ್ನು ನಾವೆಲ್ಲ ಶಿರಸಾ ವಹಿಸುತ್ತೇವೆ. ಗುರುಗಳ ಆಶೀರ್ವಾದಿಂದಲೇ ನಾನು ಈ ಹಂತದಲ್ಲಿದ್ದೇನೆ. ಕುಮಟಾ-ಹೊನ್ನಾವರ ಭಕ್ತರು ಬಹಳ ಪ್ರೀತಿ, ವಿಶ್ವಾಸದಿಂದ ಚಾತುರ್ಮಾಸ್ಯ ನೆರವೇರಿಸಿಕೊಟ್ಟಿರುವುದಕ್ಕೆ ನಿವೆಲ್ಲರೂ ಅಭಿನಂದನಾರ್ಹರು ಎಂದರು.

ಉದ್ಯಮಿ ಮುಳೀಧರ ಪ್ರಭು ಮಾತನಾಡಿ, ಚಾತುರ್ಮಾಸ್ಯದ ಕೊನೆ ಘಳಿಗೆಯಲ್ಲಿ ಇಬ್ಬರು ಯತಿಶ್ರೇಷ್ಠರ ಭಾಗ್ಯ ನಮಗೆ ದೊರೆತಿದೆ. ಕೋನಳ್ಳಿಯಲ್ಲಿ ೪೨ ದಿನಗಳ ಕಾಲವೂ ಜ್ಞಾನ ದಾಸೋಹ, ಅನ್ನ ದಾಸೋಹದ ಮೂಲಕ ಭಕ್ತಿ ಮತ್ತು ಗುರುಗಳ ಸೇವಾಭಾವದ ಶ್ರೇಷ್ಠತೆಯ ಅನುಭೂತಿ ಆಗಿದೆ. ಜಾತಿ ಎನ್ನುವುದು ಇತ್ತೀಚೆಗೆ ಬೇರೆ ಬೇರೆ ದ್ವೀಪಗಳಾಗಿ ನಡುಗಡ್ಡೆಗಳಾಗಿವೆ. ಆದರೆ ಕೋನಳ್ಳಿಯಲ್ಲಿ ನಡೆದ ಚಾತುರ್ಮಾಸ್ಯವು ಎಲ್ಲ ಜಾತಿಗಳ ದ್ವೀಪಗಳ ನಡುವಿನ ಸ್ನೇಹ ಸೇತುವೆಯಾಗಿ ಪ್ರೀತಿ-ವಾತ್ಸಲ್ಯದ ಬಂಧ ಶ್ರೀಗಳ ಕೃಪೆಯಿಂದ ದೊರೆತಿದೆ. ಈ ಚಾತುರ್ಮಾಸ್ಯ ಸಮಿತಿಯ ಶ್ರಮದಾನ ಮಾದರಿಯಾಗಿದೆ ಎಂದರು.

ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ಕೋನಳ್ಳಿ ಅವರು ಸಂಪೂರ್ಣ ಚಾತುರ್ಮಾಸ್ಯ ಕಾರ್ಯಕ್ರಮದ ವಿವರವನ್ನು ಮತ್ತು ಗುರುಗಳ ಮಾರ್ಗದರ್ಶನ, ಭಕ್ತರ ಸಹಕಾರವನ್ನು ಸ್ಮರಿಸುವ ಮೂಲಕ ಸರ್ವರನ್ನು ಅಭಿನಂದಿಸಿ ಭಾವೂಕರಾದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಸತೀಶ ನಾಯ್ಕ, ಕಾಂಗ್ರೆಸ್ ಮುಖಂಡರಾದ ಮಂಜುನಾಥ ಎಲ್.ನಾಯ್ಕ, ರತ್ನಾಕರ ನಾಯ್ಕ, ಭುವನ್ ಭಾಗ್ವತ್, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಪ್ರಮುಖರಾದ ಸಿ.ಬಿ.ನಾಯ್ಕ, ಗೋವಿಂದ ನಾಯ್ಕ, ಮಂಜುನಾಥ ನಾಯ್ಕ ಗೇರಸೊಪ್ಪ, ವಾಮನ ನಾಯ್ಕ ಮಂಕಿ, ಆರ್.ಎಂ.ನಾಯ್ಕ,, ವೆಂಕಟೇಶ ನಾಯ್ಕ ಭಟ್ಕಳ, ಎಸ್.ಕೆ.ನಾಯ್ಕ, ಪ್ರಶಾಂತ ನಾಯ್ಕ, ಸುಬ್ರಾಯ ನಾಯ್ಕ, ಕಿರಣ ಚಂದ್ ಪುಷ್ಪಗಿರಿ, ಹರಿದ್ವಾರ ಮಠದ ಮ್ಯಾನೇಜರ್ ನರೇಂದ್ರ ಪಾಟಿದರ್ ಇತರರಿದ್ದರು.

ಬಳಿಕ ಶ್ರೀಗಳು ಎಲ್ಲ ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿದರು.ಬಳಿಕ ನಡೆದ ಪ್ರಸಾದ ಭೋಜನದಲ್ಲಿ ಸಾವಿರಾರು ಭಕ್ತರಿ ಪಾಲ್ಗೊಂಡು ಧನ್ಯತೆ ಮೆರೆದರು.
ಶ್ರೀಗಳ ಸೀಮೋಲ್ಲಂಘನದ ನಿಮಿತ್ತ ಕೋನಳ್ಳಿಯಿಂದ ಬೃಹತ್ ಸಂಖ್ಯೆಯಲ್ಲಿ ಬೈಕ್, ಕಾರುಗಳ ಮೂಲಕ ದೀವಗಿಯ ಅಘನಾಶಿನಿ ನದಿ ತೀರದ ವರೆಗೆ ಮೆರವಣಿಗೆ ಮೂಲಕ ತೆರಳಿದ ಸೀಮೋಲ್ಲಂಘನದಲ್ಲಿ ಭಕ್ತರು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಅಘನಾಶಿನಿ ನದಿಯಲ್ಲಿ ಬ್ರಹ್ಮಾನಂದ ಶ್ರೀಗಳು ಹಾಲು, ಅರಿಶಿನ, ಕುಂಕುಮ, ಪುಷ್ಪ ಸಹಿತ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದರು.ಅಲ್ಲಿಂದ ಶ್ರೀಗಳು ದೀವಗಿಯ ಶ್ರೀ ರಮಾನಂದ ಸ್ವಾಮೀಗಳ ಮಠಕ್ಕೆ ತೆರಳಿ ಶ್ರೀ ಹನುಮಂತ ದೇವರ ದರ್ಶನ ಪಡೆದು, ರಾಮೈಕ್ಯರಾದ ಶ್ರೀ ರಮಾನಂದ ಗುರುಗಳ ಬೃಂದಾವನಕ್ಕೆ ನಮಸ್ಕರಿಸುವ ಮೂಲಕ ಚಾತುರ್ಮಾಸ್ಯ ವೃತಾಚರಣೆ ಸಂಪನ್ನಗೊಂಡಿತು. ಅಲ್ಲಿಂದ ಶ್ರೀಗಳು ನೇರವಾಗಿ ಕೋನಳ್ಳಿಗೆ ತೆರಳಿ ಧರ್ಮಸಭೆಯಲ್ಲಿ ಪಾಲ್ಗೊಂಡರು.

ಧರ್ಮಸಭೆಯಲ್ಲಿ ಚಾತುರ್ಮಾಸ್ಯ ಸಮಿತಿಯ ಹೊನ್ನಾವರ ತಾಲೂಕಾಧ್ಯಕ್ಷ ಟಿ.ಟಿ.ನಾಯ್ಕ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಕೋಶಾಧ್ಯಕ್ಷ ಗೋವಿಂದ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ಮತ್ತು ಯಶವಂತ ನಾಯ್ಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕ ಕೋಡ್ಕಣಿ ವಂದಿಸಿದರು. ಚಾತುರ್ಮಾಸ್ಯ ವೃತಾಚರಣೆ ಸಮಿತಿ, ನಾಮಧಾರಿ ಸಂಘ, ಯುವ ನಾಮಧಾರಿ ಸಂಘ, ಮಹಿಳಾ ಮಂಡಳ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಹಕರಿಸಿದರು.

ಇದನ್ನೂ ಓದಿ : ಫೋಟೋಗ್ರಾಫರ್‌ ಅಸೋಸಿಯೇಷನ್‌ ವತಿಯಿಂದ ವಿಶ್ವ ಛಾಯಾಚಿತ್ರ ದಿನಾಚರಣೆ