ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉದ್ಯಮಿ ಹಾಗೂ ಕಾಂಗ್ರೇಸ್ ಮುಖಂಡರು ಹಾಗೂ ಸಿ.ಎಂ. ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಯಶೋಧರ ನಾಯ್ಕ (69) ಅವರು ಅನಾರೋಗ್ಯದಿಂದ ಇಂದು ಮುಂಬೈಯಲ್ಲಿ ನಿಧನರಾದರು.
ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.. ಮೂಲತಃ ಹೊನ್ನಾವರ ತಾಲೂಕಿನ ಮಾಳ್ಕೋಡ ಗ್ರಾಮದ ನಿವಾಸಿಯಾಗಿದ್ದ ನಾಯ್ಕ ಅವರು ಕಳೆದ ನಾಲ್ಕೈದು ದಶಕಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು. ಅಲ್ಲಿಯೇ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಸಂಸ್ಥೆ ಸ್ಥಾಪಿಸಿ ಯಶಸ್ವೀ ಉದ್ಯಮಿಯಾಗಿ ಹೆಸರು ಮಾಡಿದ್ದರು. ನಂತರ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡು ಹೆಸರುವಾಸಿಯಾಗಿದ್ದರು.
ಇದಾದ ಬಳಿಕ ಕಳೆದ ಎರಡು ದಶಕಗಳಿಂದ ಕುಮಟಾದಲ್ಲಿ ನೆಲೆಸಿದ್ದ ಅವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ, ನಂತರ ಕುಮಟಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿಯೂ ಚುನಾವಣೆ ಹೋರಿದ್ದರು. ಬಳಿಕ ಕಾಂಗ್ರೇಸ್ ಸೇರ್ಪಡೆಯಾಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದ ಪ್ರಮುಖ ಆಕಾಂಕ್ಷಿಗಳಲ್ಲೊಬ್ಬರಾಗಿದ್ದರು.
ಸಾಮಾಜಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ಅವರು “ಯಶೋಧರ ನಾಯ್ಕ ಟ್ರಸ್ಟ್” ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿ, ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಸಲ್ಲಿಸಿದ್ದರು. ಅವರ ಸೇವಾ ಮನೋಭಾವ, ಪ್ರಾಮಾಣಿಕತೆ ಹಾಗೂ ಸ್ನೇಹಪರ ಧೋರಣೆ ಜನಮನಗಳನ್ನು ಗೆದ್ದಿತ್ತು. ನಾಯ್ಕ ಅವರ ನಿಧನಕ್ಕೆ ರಾಜಕೀಯ ವಲಯ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.