ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ತೀವ್ರ ಮಳೆಯಿಂದ ತಾಲೂಕಿನ ಬಂಕನಾಳದ ದಾಕ್ಷಾಯಿಣಿ ಈಡಪ್ಪ ನಾಯ್ಕ ಇವರ ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದ್ದು,ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿ, ರಾಘವೇಂದ್ರ ನಾಯ್ಕ ಕುಟುಂಬಕ್ಕೆ ಧನಸಹಾಯ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಮಳೆಯಿಂದ ತೀವ್ರತರವಾಗಿ ಮನೆ ಕಳೆದುಕೊಂಡಿರುವ ಈ ಕುಟುಂಬ ಇದೀಗ ಕೊಟ್ಟಿಗೆಯಲ್ಲಿ ತಾಡಪಲ್ ಹಾಕಿಕೊಂಡು ದಿನನಿತ್ಯದ ಬದುಕು ನಡೆಸುತ್ತಿದೆ. ಇದು ಅಮಾನವೀಯ. ಈ ರೀತಿ ಯಾರಿಗೂ ಆಗಬಾರದು. ಇದೊಂದು ದುರದೃಷ್ಟಕರವಾದ ಘಟನೆ. ಈ ದುರ್ಘಟನೆ ನಡೆದು ಒಂದು ವಾರ ಕಳೆದರೂ ಇವರಿಗೆ ಸರಕಾರದಿಂದ ಪರಿಹಾರ ಇದುವರೆಗೂ ಬಂದಿಲ್ಲ. ಕೇವಲ ಸ್ಥಳೀಯ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಬಡವರ ಮನೆಗೆ ಭಿಕ್ಷೆ ನೀಡುವಂತೆ ನೀಡುವ ಒಂದು ಲಕ್ಷ ಯಾವ ಕೆಲಸಕ್ಕೂ ಸಾಕಾಗುವುದಿಲ್ಲ. ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮನೆಗೆ ಹಾನಿ ಸಂಭವಿಸಿದಾಗ ಸರಕಾರದಿಂದ ಅನುದಾನ ನೀಡಿದ ಉದಾಹರಣೆಗಳು ತುಂಬಾ ಇದೆ. ಈ ಕೂಡಲೇ ಸ್ಥಳೀಯ ಶಾಸಕರು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿ, ಕನಿಷ್ಟ 5 ಲಕ್ಷ ರೂಪಾಯಿಯಷ್ಟು ಮುಖ್ಯಮಂತ್ರಿ ವಿಶೇಷ ಪರಿಹಾರ ಕೊಡಿಸಬೇಕೆಂದು ಅವರು ಆಗ್ರಹಿಸಿದರು.
ಈ ವೇಳೆ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಮೇಲ್ನೋಟಕ್ಕೆ ತಾಲೂಕು ಆಡಳಿತ ಸರಕಾರಕ್ಕೆ ಹಾನಿಯನ್ನು ವರದಿ ಸಲ್ಲಿಸುವ ಕೆಲಸ ಮಾಡಿದೆ. ಆದರೆ ಸರಕಾರದಿಂದ ಇದುವರೆಗೂ ಪರುಹಾರ ಬರದಿರುವುದು ನಿಜಕ್ಕೂ ಜನರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಸರಕಾರದಿಂದ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಪ್ರಮುಖರಾದ ಬನವಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ ಮರಿಗುಡ್ಡೆ, ನಾಗೇಂದ್ರ ಗೌಡ, ಸೇರಿದಂತೆ ಇನ್ನಿತರರು ಇದ್ದರು.