ಪ್ರಮುಖ ಸುದ್ದಿ
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶಾಸಕ ಸತೀಶ್ ಸೈಲ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದ್ದು,ರಾತ್ರಿ ತಡವರೆಗೂ ಪರಿಶೀಲನೆ ನಡೆಸಿದ್ದು, ಮನೆಯಲ್ಲಿ ಸಿಕ್ಕ ನಗದು ಹಾಗೂ ಚಿನ್ನಾಭರಣವನ್ನ ವಶಕ್ಕೆ ತೆಗೆದುಕೊಂಡಿದ್ದಾರೆನ್ನಲಾಗಿದೆ.
ಕಾರವಾರದ ಸದಾಶಿವಘಡ ಹಾಗೂ ಚಿತ್ತಾಕುಲದಲ್ಲಿರುವ ಶಾಸಕರ ಮನೆಯಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ವಶಕ್ಕೆ ಪಡೆದ ವಸ್ತುಗಳನ್ನ ಬಾಕ್ಸ್‌ನಲ್ಲಿ ತುಂಬಿಕೊಂಡು ಕಾರನಲ್ಲಿ ಗೋವಾದತ್ತ ಪ್ರಯಾಣಿಸಿದ್ದಾರೆನ್ನಲಾಗಿದೆ.
ಶೋಧದ ವೇಳೆ ಕಾರವಾರದ ಇಂಡಿಯನ್ ಬ್ಯಾಂಕ್‌ನ ಮ್ಯಾನೇಜರ್‌ಗಳುನ ಸೇರಿದಂತೆ ಮೂವರು ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಸಕರ ಮನೆಯಲ್ಲಿ ಹಾಜರಿದ್ದರು. ಶಾಸಕರ ಮನೆ ಹಾಗೂ ಕಾರ್ಯಾಲಯದ ಮ್ಯಾನೇಜರ್, ಸಹಾಯಕನನ್ನೂ ವಿಚಾರಣೆಗಾಗಿ ಕರೆಯಿಸಿಕೊಂಡಿದ್ದಾರೆ.
ಮನೆಯಿಂದ ನಗದು ಮತ್ತು ಬಂಗಾರ ಸಿಕ್ಕಿರುವ ಸಾಧ್ಯತೆಗಳಿದ್ದು, ಹಣಕಾಸು ವಹಿವಾಟುಗಳ ಬಗ್ಗೆ ಬ್ಯಾಂಕ್ ಮ್ಯಾನೇಜರ್‌ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಳಿಗ್ಗೆಯಿಂದ ಆರಂಭವಾದ ಶೋಧ ಕಾರ್ಯಾಚರಣೆ ಸಿಐಎಸ್ಎಫ್ ಭದ್ರತೆಯಲ್ಲಿ ನಿರಂತರವಾಗಿ ಮುಂದುವರಿದಿತ್ತು.