ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಲ್ಲಿನ ಹಳದೀಪುರ ಸಾಲಿಕೇರಿ ಪೆಟ್ರೋಲ್ ಪಂಪ್‌ನಲ್ಲಿ ಗಲಾಟೆ ಮಾಡುತ್ತಿದ್ದ ಹತ್ತಕ್ಕೂ ಹೆಚ್ಚು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಸಾಲಿಕೇರಿ ಪೆಟ್ರೋಲ್ ಬಂಕ್‌ನಲ್ಲಿ ಯುವಕರ ಗುಂಪೊಂದು ಗಲಾಟೆ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಈ ವೇಳೆ ಸ್ಥಳೀಯ ಖಾಸಗಿ ಚಾನಲ್‌ನ ಮಹಿಳಾ ವರದಿಗಾರರೊಬ್ಬರು ತಮ್ಮ ಬೈಕ್‌ಗೆ ಪೆಟ್ರೋಲ್ ಹಾಕಿಸಲು ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಗಲಾಟೆಯ ದೃಶ್ಯಾವಳಿಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ವೇಳೆ, ಅದನ್ನು ಗಮನಿಸಿದ ಯುವಕರ ತಂಡ ಆ ಮಹಿಳಾ ವರದಿಗಾರ್ತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಸಹ ಮುಂದಾಗಿದ್ದಾರೆಯೆಂದು ತಿಳಿದುಬಂದಿದೆ.
ತಕ್ಷಣ ಗಲಾಟೆಯ ವಿಚಾರವನ್ನು ಮಹಿಳಾ ವರದಿಗಾರ್ತಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿತಿಳಿದ ಹೊನ್ನಾವರ ಪೊಲೀಸರು ಸ್ಥಳಕ್ಕೆ ಬಂದು ಹತ್ತಕ್ಕೂ ಹೆಚ್ಚು ಮಂದಿ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದ ಯುವಕರು ಕುಮಟಾದ ಗ್ರಾಮೀಣ ಭಾಗದವರಾಗಿದ್ದಾರೆಂದು ಹೇಳಲಾಗಿದೆ.