ಸುದ್ದಿಬಿಂದು ನ್ಯೂರೋ ವರದಿ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಕುರಿತು ವ್ಯಕ್ತಿಯೊಬ್ಬರು ನೀಡಿದ್ದ ದೂರು ತನಿಖೆ ನಡೆಯುತ್ತಿರುವಾಗಲೇ. ಇದೀಗ ಇದೇ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದ್ದು, ದೂರುದಾರರ ಪಟ್ಟಿಗೆ ಜಯಂತ ಶೆಟ್ಟಿ ಎಂಬುವವರು ಸೇರ್ಪಡೆಗೊಂಡಿದ್ದಾರೆ. ಅವರು ಶೀಘ್ರದಲ್ಲೇ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ಘಟನೆಗಳ ಕುರಿತು ಜಯಂತ ಶೆಟ್ಟಿ ಅವರು ಕೆಲ ಗಂಟೆ ಹಿಂದಷ್ಟೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಪ್ರಾಥಮಿಕ ಚರ್ಚೆ ನಡೆಸಿದರು. ಭಾನುವಾರ ತನಿಖಾಧಿಕಾರಿಗಳಿಗೆ ರಜೆ ಇರುವ ಕಾರಣ, ಸೋಮವಾರ ಎಲ್ಲಾ ವಿವರಗಳು ಮತ್ತು ಸಾಕ್ಷ್ಯಗಳನ್ನು ಅಧಿಕೃತವಾಗಿ ನೀಡುವುದಾಗಿ ಶೆಟ್ಟಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಯಂತ ಶೆಟ್ಟಿ, “ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕೊಲೆಗಳ ಬಗ್ಗೆ ನಾನು ಹಲವಾರು ವೇದಿಕೆಗಳಲ್ಲಿ ಮಾತನಾಡಿದ್ದೆ. ಆದರೆ ಆ ಸಮಯದಲ್ಲಿ ಜನರಲ್ಲಿ ಭಯ ಇತ್ತು. ಯಾರೂ ಬಾಯಿ ಬಿಡಲು ಮುಂದಾಗಿರಲಿಲ್ಲ,” ಎಂದು ಹೇಳಿದ್ದಾರೆ. ಸರ್ಕಾರ ಈಗ ಎಸ್‌ಐಟಿ ರಚಿಸಿರುವುದರಿಂದ ಭಯ ಕಡಿಮೆಯಾಗಿ ತಾವು ದೂರು ನೀಡಲು ಮುಂದೆ ಬಂದಿರುವುದಾಗಿ ಅವರು ಹೇಳಿದರು.
ಶೆಟ್ಟಿ ಅವರ ಪ್ರಕಾರ, ತಮ್ಮ ಜೊತೆಗೆ ಇನ್ನೂ ಐದರಿಂದ ಆರು ಮಂದಿ ಸಾಕ್ಷಿಗಳು ಮುಂದೆ ಬರುವ ಸಾಧ್ಯತೆ ಇದೆ. “ಮರಣೋತ್ತರ ಪರೀಕ್ಷೆ ನಡೆಸದೆ, ಎಫ್‌ಐಆರ್ ದಾಖಲಿಸದೆ ಮೃತದೇಹಗಳನ್ನು ಹೂತು ಹಾಕಲಾಗುತ್ತಿತ್ತು. ನಾನು ಸ್ವತಃ ಒಂದು ಬಾಲಕಿಯ ಮೃತದೇಹ ವಾರಗಟ್ಟಲೆ ಹಾಗೆಯೇ ಬಿದ್ದಿದ್ದರೂ ಪೊಲೀಸರು ಕ್ರಮ ಕೈಗೊಳ್ಳದೆ ಹೂತುಬಿಟ್ಟಿರುವುದನ್ನು ಕಣ್ಣಾರೆ ನೋಡಿದ್ದೇನೆ,” ಎಂದು ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳು ಯಾಕೆ ಆ ಸಂದರ್ಭದಲ್ಲಿ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದಾಗ, “ಆ ಸಮಯದಲ್ಲಿ ಬಾಯಿಬಿಡುವ ಪರಿಸ್ಥಿತಿ ಇರಲಿಲ್ಲ,” ಎಂದು ಶೆಟ್ಟಿ ಸ್ಪಷ್ಟಪಡಿಸಿದರು. ಜೊತೆಗೆ, ತಮ್ಮ ಕುಟುಂಬದ ಹೆಣ್ಣುಮಗಳಾದ ಪದ್ಮಲತಾ ಪ್ರಕರಣಕ್ಕೂ ಸಂಬಂಧಿಸಿದಂತೆ ಎಸ್‌ಐಟಿಗೆ ಮಾಹಿತಿ ನೀಡಲಿದ್ದಾರೆಂದು ತಿಳಿಸಿದ್ದಾರೆ. ಜಯಂತ ಶೆಟ್ಟಿ ಅವರ ಈ ಹೇಳಿಕೆಗಳು ಪ್ರಕರಣದ ತನಿಖೆಗೆ ಹೊಸ ಆಯಾಮವನ್ನು ನೀಡಿದ್ದು, ಎಸ್‌ಐಟಿ ಮುಂದೆ ಯಾವ ರೀತಿಯ ಸಾಕ್ಷ್ಯಗಳು ಬಯಲಾಗುತ್ತವೆ ಎಂಬುದರತ್ತ ಎಲ್ಲರ ಗಮನ ಹರಿದಿದೆ.