ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: “ಶಿಕ್ಷಕರು ಸಮಾಜದ ದಿಕ್ಕು ತೋರಿಸುವ ದೀಪಗಳು” ಎಂಬ ನುಡಿಗಟ್ಟನ್ನು ತಮ್ಮ ಸೇವಾ ಜೀವನದಲ್ಲಿ ಅರ್ಥಪೂರ್ಣವಾಗಿ ತೋರಿಸಿ ಸೇವಾ ನಿವೃತ್ತಿ ಹೊಂದಿದ ಹಿರಿಯ ಪ್ರಾಥಮಿಕ ಶಾಲೆಯ ಬರ್ಗಿ ನಂಬರ್ 1ರ ಪ್ರಭಾರಿ ಮುಖ್ಯಾಧ್ಯಾಪಕಿ ಶ್ಯಾಮಲಾ ನಾಯಕ ಅವರ ಬಿಳ್ಕೋಡುಗೆ ಕಾರ್ಯಕ್ರಮ ಇಂದು ಶಾಲಾ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಳೆ-ಹೊಸ ವಿದ್ಯಾರ್ಥಿಗಳು, ಪೋಷಕರು, ನಾಗರಿಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಒಟ್ಟಾಗಿ ಸೇರಿ ಶ್ಯಾಮಲಾ ನಾಯಕರ ಸೇವೆಗಳನ್ನು ಶ್ಲಾಘಿಸಿದರು.

ಬರ್ಗಿಯ ಶಾಲೆಯಲ್ಲಿ ಕಳೆದ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ಯಾಮಲಾ ನಾಯಕ ಅವರು ತಮ್ಮ ಮಾತಿನಲ್ಲಿ ಕಣ್ಣೀರು ತುಂಬಿಕೊಂಡು, “ಈ ಶಾಲೆಯ ಮಕ್ಕಳ ಜೊತೆ ಕಳೆದ ದಿನಗಳು ತನ್ನ ಜೀವನದ ಅಳಿಯದ ನೆನಪು. ಊರಿನ ನಾಗರಿಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕ ವೃಂದದವರು ನನಗೆ ನೀಡಿದ ಪ್ರೀತಿ, ಸಹಕಾರ ಮತ್ತು ಗೌರವವನ್ನು  ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಹೇಳುವ ಮೂಲಕ ಭಾವುಕರಾದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಹಾಗೂ ನಾಗರಿಕರು ಮಾತನಾಡಿ, “ಶ್ಯಾಮಲಾ ನಾಯಕರ ಆಡಳಿತ ಶೈಲಿ ಶಾಲೆಯ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಅವರು ತೋರಿದ ಶ್ರಮ ಶ್ಲಾಘನೀಯ, ಅವರು ಶಾಲೆಯ ಕಟ್ಟಡದ ಸುಧಾರಣೆ, ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸುವಲ್ಲಿ ನೀಡಿದ ವಿಶೇಷ ಕೊಡುಗೆಗಳನ್ನು ಸ್ಮರಿಸಿದರು.

ಶಾಲೆಯ ಪ್ರಗತಿಗೆ ಕೊಡುಗೆ ನೀಡಿದ ಶ್ಯಾಮಲಾ ನಾಯಕರಿಗೆ ಹೂಮಾಲೆ, ಶಾ, ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ನಾಗರಿಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶ್ಯಾಮಲಾ ನಾಯಕರನ್ನು ಹೃದಯಪೂರ್ವಕವಾಗಿ ಅಭಿನಂದಿಸಿ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿದರು.

ಹಳೆ ವಿದ್ಯಾರ್ಥಿಗಳು ಶ್ಯಾಮಲಾ ನಾಯಕರ ನೆನಪಿನಿಗಾಗಿ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು, ಕಾರ್ಯಕ್ರಮವನ್ನು ಶಿಕ್ಷಕಿ ಮಮತಾ ನಾಯಕ  ನಿರೂಪಿಸಿದರು. ಶಿಕ್ಷಕ ರಾಮನಾಥ ನಾಯ್ಕ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

ಇದನ್ನೂ ಓದಿ:ಧರ್ಮಸ್ಥಳದ 6ನೇ ಪಾಯಿಂಟ್‌ನಲ್ಲಿ ಮೂಳೆ ಪತ್ತೆ ..!