ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮನುಷ್ಯರಾದ ನಾವು ತನ್ನನ್ನು ತಾನು ಪರಮಾತ್ಮನಿಂದ ಬೇರೆಯೆಂದು ಭಾವಿಸದೆ, ಭಗವತಂನಲ್ಲಿ ಒಂದಾದಾಗ ಮಾತ್ರ ಭಗವತ್ ಪ್ರಾಪ್ತಿ ಮತ್ತು ಭಗವತ್ ಕೃಪೆಗೆ ಪಾತ್ರರಾಗಲು ಸಾಧ್ಯ’ ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರು ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆಯ ೧೮ನೇ ದಿನವಾದ ಭಾನುವಾರ ಕೊಡಕಣಿ ಗ್ರಾ.ಪಂ ಕೂಟದಿಂದ ನಡೆದ ಗುರು ಸೇವಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಿರಂತರವಾಗಿ ದೇವರ ಧ್ಯಾನ ಮಾಡುವ ಮೂಲಕ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿ ಪಡೆಯಬೇಕು. ಭಗವತ್ ಪ್ರಾಪ್ತಿ, ಭಗವತ್ ಕೃಪೆಗೆ ಪತ್ರರಾಗಬೇಕೆಂಬ ಮೂಲ ಚಿಂತನೆ ನಮ್ಮಲ್ಲಿರಬೇಕು. ಬ್ರಹ್ಮ ಮತ್ತು ಆತ್ಮದ ಏಕತ್ವ ಅಭೇದ ಜ್ಞಾನವಾಗಬೇಕು. ಅಭೇದ ಜ್ಞಾನವು ಆತ್ಮ ಮತ್ತು ಪರಮಾತ್ಮ ಒಂದೇ ಎಂಬುದಾಗಿದೆ. ಅಭೇದ ಜ್ಞಾನವನ್ನು ಅರಿತಾಗ ಭಗವತ್ ಪ್ರಾಪ್ತಿಯಾಗುತ್ತದೆ ಮತ್ತು ಭಗವಂತನಿಂದ ನಿಜವಾದ ಜ್ಞಾನವನ್ನು ಪಡೆಯಲು ಸಾಧ್ಯ ಎಂದು ಭಕ್ತ ಶಿರೋಮಣಿ ಕಥೆಯನ್ನು ವಿವರಿಸಿದರು.

೧೮ನೇ ದಿನದ ಚಾತುರ್ಮಾಸ್ಯ ವ್ರತಾಚಾರಣೆಯಲ್ಲಿ ಕೊಡಕಣಿ ವ್ಯಾಪ್ತಿಯ ಸಮಸ್ತ ನಾಮಧಾರಿ ಸಮಾಜ ಬಾಂಧವರು, ಅಧ್ಯಕ್ಷರು ನಾಮಧಾರಿ ಅಭಿವೃದ್ಧಿ ಸಂಘ ನಿಚ್ಚಲಮಕ್ಕಿ, ಶ್ರೀತಿರುಮಲ ವೆಂಕಟರಮಣ ದೇವಸ್ಥಾನ, ಗುರುಮಠ, ಅರಸಕೇರಿ, ಭಟ್ಕಳ ಹಾಗೂ ದೇವಸ್ಥಾನ ವ್ಯಾಪ್ತಿಯ ೧೮ ಕೂಟಗಳ ಸಮಸ್ತ ನಮಧಾರಿ ಸಮಾಜ ಬಾಂಧವರು ಮತ್ತು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಭಟ್ಕಳ, ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘ ಅಸರಕೇರಿ, ಕುಮಟಾ-ಹೊನ್ನಾವರ ಸಮಸ್ತ ಹಿಂದೂ ಮುಕ್ರಿ ಸಮಾಜ ಬಾಂಧವರು, ನಾಮಧಾರಿ ನೌಕರರ ಸಂಘ ಹೊನ್ನಾವರ, ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯ ಗುರುದೇವ ಮಠದ ಹಳೆಯ ವಿದ್ಯಾರ್ಥಿಗಳು ಗುರುಪಾದುಕಾ ಪೂಜೆ ಸಲ್ಲಿಸಿದರು.

ಪರಮೇಶ್ವರ ಪಿ. ನಾಯ್ಕ್ ಕೊಡಕಣಿ, ಭಾಸ್ಕರ್ ನಾರಾಯಣ ನಾಯ್ಕ್ ಕೋನಳ್ಳಿ ಹಾಗೂ ಉದಯ ನಾಯ್ಕ್ ತೊಪ್ಪಲಕೇರಿ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಆನಂದ್ ಅಸ್ನೋಟಿಕರ್, ವಾಣಿಜ್ಯ ತೆರಿಗೆ ಅಧಿಕಾರಿ ರಾಜು ನಾಯ್ಕ್, ನಿವೃತ್ತ ಡಿಎಫ್‌ಒ ಉದಯ್ ನಾಯ್ಕ್ ಶ್ರೀಗಳ ಫಲಮಂತ್ರಾಕ್ಷತೆ ಪಡೆದರು. ಕೊಡಕಣಿ, ಕೋನಳ್ಳಿ ಹಾಗೂ ದೇವರಹಕ್ಕಲ್ ಗ್ರಾಮದ ಸಮಾಜ ಬಾಂಧವರು ಗುರು ಸೇವೆ ಸಲ್ಲಿಸಿದರು. ಕೊಡಕಣಿಯ ಸುನಿಲ್ ಮಾದೇವ ನಾಯ್ಕ್ ಇವರು ಸಿಹಿ ವಿತರಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ನಾಯಕರ ಮ್ಯೂಜಿಕಲ್ ಚೇರದ ಆಸೆಗೆ ರಾಜ್ಯದ ಜನ ಬಲಿಯಾಗುತ್ತಿದ್ದಾರೆ