ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ರೈತರ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಾಜ್ಯದಲ್ಲಿ ಬಿಜೆಪಿಯು ಆಡಳಿತದಲ್ಲಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಖಾರ್ಲೆಂಡ್ ನಿರ್ಮಾಣ ಮಾಡಲಾಗಿತ್ತು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಖಾರ್ಲೆಂಡ್ ನಿರ್ಮಾಣ ಮಾಡಲಾಗಿದ್ದು, ಅದರಲ್ಲೂ ಕಿಮಾನಿ ಹಾಗೂ ಗುಂದ ಭಾಗದಲ್ಲಿ ನಿರ್ಮಾಣವಾದ ಖಾರ್ಲೆಂಡ್ ರಸ್ತೆಯ ಮೇಲೆ ಸಂಚರಿಸುವವರು ಈಗ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕಾಮಗಾರಿಯನ್ನು ಗುತ್ತಿಗೆ ಪಡೆದವರು ಇದನ್ನು ಐದು ವರ್ಷ ಮೆಂಟೆನ್ಸ್ ಮಾಡಬೇಕು ಎಂಬ ನಿಯಮವಿದೆ. ಆದರೆ ಕಾಮಗಾರಿ ಮಾಡಿದ ಗುತ್ತಿಗೆದಾರರು “ಎದ್ದನ್ನೋ ಬಿದ್ದನ್ನೋ” ಎನ್ನುವಂತೆ ಸಿಕ್ಕಷ್ಟನ್ನು ದೋಚಿಕೊಂಡು ಹೋಗಬೇಕೆಂಬ ಆತುರದಲ್ಲಿ ಮನಸ್ಸಿಗೆ ಬಂದ ಹಾಗೆ ಕಾಮಗಾರಿ ಮಾಡಿ ತಲಾಖಾದಿದ್ದಾರೆ. ಅವರಿಗೆ ಮೂಗುದಾರಿ ಹಾಕಬೇಕಾದ ಸಂಬಂಧಿಸಿದ ಅಧಿಕಾರಿಗಳು “ಆ ಕಾಮಗಾರಿಗೂ ನಮಗೂ ಸಂಬಂಧವಿಲ್ಲ” ಎಂಬಂತೆ ನಿರ್ಲಿಪ್ತವಾಗಿದ್ದಾರೆ.
ಸರಿಯಾದ ರೀತಿಯಲ್ಲಿ ಮಣ್ಣನ್ನು ತುಂಬಿಸದೆ ಹೋಗಿರುವ ಕಾರಣ ಮಳೆಗಾಲದಲ್ಲಿ ಈ ರಸ್ತೆ ಕೇಸರು ಗದ್ದೆಯಂತಾಗಿದೆ. ಇನ್ನೂ ಕೆಲವು ಕಡೆ ಪಿಚಿಂಗ್ ಕೂಡ ಮಾಡದೆ, ಹಿಂದಿನ ಸ್ಥಿತಿಯಲ್ಲೇ ಬಿಟ್ಟು ಹೋಗಿರುವುದು ಕಂಡುಬರುತ್ತದೆ. ಒಂದೇ ಒಂದು ಬುಟ್ಟಿಯಷ್ಟು ಮಣ್ಣನ್ನೂ ಹಾಕದೆ ಬಿಟ್ಟಿರುವ ದೃಶ್ಯವಿದೆ. ಕಳೆದ ಎರಡುವರೆ ವರ್ಷಗಳ ಹಿಂದೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಲೆಕ್ಕಾಚಾರದಲ್ಲಿ ಈ ಕಾಮಗಾರಿ ಪೂರ್ಣಗೊಂಡಿದೆ. ಆದರೆ ನಂತರ ಯಾರೂ ಈ ಕಾಮಗಾರಿಯ ಹೇಗಿದೆ ಎಂದು ನೋಡುವುದಕ್ಕೂ ಈತ ತಲೆಹಾಕಿಲ್ಲ. ಕೆಲವು ಕಡೆ ಅರ್ಧಮರ್ಧ ಕಾಮಗಾರಿ ಮಾಡಲಾಗಿದೆ. ಅಧಿಕಾರಿಗಳು ಯಾವ ಲಾಭವನ್ನು ಇಟ್ಟುಕೊಂಡು ಬಿಲ್ ಪಾಸ್ ಮಾಡಿದ್ದಾರೆ ಎನ್ನುವುದು ಜನರಿಗೆ ಶಂಕೆ ಹುಟ್ಟಿಸುವಂತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಈ ಖಾರ್ಲೆಂಡ್ ರಸ್ತೆಯಲ್ಲಿ ಲಘು ವಾಹನ ಬಿಟ್ಟರೆ, ಉಳಿದ ಯಾವುದೇ ವಾಹನ ಸಂಚರಿಸಲಾರದಂತಾಗಿದೆ. ಒಂದು ಬಾರಿ ಭಾರೀ ವಾಹನ ಓಡಿದರೆ, ರಸ್ತೆ ಮಧ್ಯೆ ಹತ್ತುಹೋಗಿ ಕ್ರೇನ್ ಮೂಲಕ ಎತ್ತಬೇಕಾದ ಪರಿಸ್ಥಿತಿ ಉಂಟಾಗಬಹುದು. ಬೈಕ್ ಹಾಗೂ ಇತರೆ ಸಣ್ಣಪುಟ್ಟ ವಾಹನ ಸವಾರರೂ ಸಹ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ತಮ್ಮ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಪ್ರಕಾರ, ಅವರು ಕ್ರಮಕೈಗೊಂಡಿಲ್ಲದಿದ್ದರೆ, ಮುಂದಿನ ಹಂತದಲ್ಲಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ತಲೆ ಬುರುಡೆ ಕೇಸ್: ತನಿಖೆಗೆ ಪೊಲೀಸರ ನಿಯೋಜನೆ