ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ಅಧಿಕಾರ ಬಂದಾಗ ಅಹಂಕಾರ ಪಡದೆ ಅಧಿಕಾರವನ್ನು ಬಳಸಿಕೊಂಡು ಅಸಾಯಕರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಹೊನ್ನಾವರದ ಚಿಕ್ಕನಕೋಡ, ಹಡಿನಬಾಳ ಗ್ರಾಪ ಕೂಟದಿಂದ ಸಲ್ಲಿಸಲಾದ ಗುರು ಸೇವೆಯನ್ನು ಸ್ವೀಕರಿಸಿ , ಶ್ರೀಗಳು ಆಶೀರ್ವಚನ ನೀಡಿದರು. ಮನುಷ್ಯನಿಗೆ ಅಧಿಕಾರ ದೊರೆತ್ತಾಗ ಅಹಂಕಾರದ ಮದ ಬರುತ್ತದೆ. ಅದರಿಂದ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಇಂದ್ರ ದೇವನ ಕಥೆಯ ಮೂಲಕ ವಿವರಣೆ ನೀಡಿದ ಶ್ರೀಗಳು, ಎಷ್ಟೆ ದೊಡ್ಡ ಅಧಿಕಾರ, ಅಂತಸ್ಥು ಬರಲಿ. ನಮ್ಮ ಕರ್ಮವನ್ನು ನಾವು ಮರೆಯಬಾರದು. ಅಹಂಭಾವ ಪಡೆದೇ ಆ ಅಧಿಕಾರದ ಮೂಲಕ ಸತ್ಕಾರ್ಯವನ್ನು ಮಾಡಬೇಕು. ಅಸಾಯಕರಿಗೆ, ನಿರ್ಗತಿಕರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಅಧಿಕಾರವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಭಗವಂತನಲ್ಲಿ ನಮ್ಮ ಶರಣಾಗತಿ ಇದ್ದರೆ ನಮಗೆ ಬರುವ ಸಂಕಷ್ಟಗಳನ್ನು ಭಗವಂತನೇ ನಿವಾರಣೆ ಮಾಡುತ್ತಾನೆ. ಈ ಭೂಮಿಯಲ್ಲಿ ನಾವು ಪಾತ್ರಧಾರಿಗಳಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಬದುಕಿನ ಪ್ರವಾಸದಲ್ಲಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಅನೇಕ ಪಾತ್ರಗಳು ಬಂದು ಹೋಗಿ ಕೊನೆಯಲ್ಲಿ ಪ್ರವಾಸ ನಿಲ್ಲುತ್ತದೆ. ಹಾಗಾಗಿ ಮನುಷ್ಯ ಕರ್ಮ ಮತ್ತು ಭಕ್ತಿ ಮಾರ್ಗದ ಮೂಲಕ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.

ನಾಮಧಾರಿ ಸಮಾಜವು ಚಾತುರ್ಮಾಸ್ಯದ ಮೂಲಕ ಎಲ್ಲ ಜನಾಂಗವನ್ನು ಒಂದೇ ಛತ್ರದಲ್ಲಿ ತರುವ ಮೂಲಕ ಎಲ್ಲರಿಗೂ ಪ್ರೀತಿ, ವಿಶ್ವಾಸ, ಸಂಸ್ಕಾರ ಮತ್ತು ಧಾರ್ಮಿಕತೆಯನ್ನು ಹಂಚುವ ಮೂಲಕ ಆಧ್ಯಾತ್ಮಿಕವಾಗಿ ಮುಂದುವರೆಯುತ್ತಿರುವುದು ಖುಷಿಯ ಸಂಗತಿ. ಇದಕ್ಕೆ ಚಾತುರ್ಮಾಸ್ಯ ವ್ರತಾಚರಣೆ ಸಹಾಯಕಾರಿಯಾಗಿದೆ. ಎಲ್ಲ ಸದ್ಭಕ್ತರು ನಿತ್ಯವೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗುರು ಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು.

ಚಾತುರ್ಮಾಸ್ಯ ವ್ರತಾಚಾರಣೆಯ ೧೩ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಹಾಗೂ ಹಾಡಿನಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಕಡಕಲ್, ಹಿರೇಬೈಲ, ಹೆರಾವಲಿ, ಬೇಣದಮನೆ, ಚಿಕ್ಕನಕೋಡ, ಕೆಂಚಗಾರ, ಗುಂಡಬಾಳ, ಗುಂಡಿಬೈಲ್, ಹಾಡಿನಬಾಳ, ಕಾವೂರು, ಹುಡಗೋಡ,  ಹಾಡಗೇರಿ ಗ್ರಾಮದ ಸಮಸ್ತ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಆರ್.ಪಿ.ನಾಯ್ಕ್ ದಂಪತಿ ಚಿಕ್ಕನಕೋಡ ಹಾಗೂ ಹರಿಯಪ್ಪ ವಾಮನ ನಾಯ್ಕ್ ದಂಪತಿ ಹುಡಗೋಡ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಹುಬ್ಬಳ್ಳಿ ಬಿಲ್ಲವ ಸಂಘದ ಪ್ರಮುಖರಾದ ಕೃಷ್ಣೆ ಬೈರೇ ಗೌಡ್ರು, ಆನಂದ್ ಪೂಜಾರ ಹಾಗೂ ಉದ್ಯಮಿ ಸತೀಶ್ ನಾಯ್ಕ್ , ಆಗಮಿಸಿ ಶ್ರೀಗಳ ದರ್ಶನ ಪಡೆದರು. ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಆಡಳಿತ ಮಂಡಳಿ ಚಿಕ್ಕನಕೋಡ, ಹಡಿನಬಾಳ, ಹುಡಗೋಡ  ಹಾಗೂ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಆಡಳಿತ ಮಂಡಳಿ ಹಡಿನಬಾಳ ಇವರು ಗುರು ಸೇವೆ ಸಲ್ಲಿಸಿದರು. ಶ್ರೀಗಳು ಸದ್ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿ ಹರಸಿದರು. ಮಧ್ಯಾಹ್ನ ನಡೆದ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಧನ್ಯರಾದರು.

ಇದನ್ನೂ ಓದಿ: ಮಾಧ್ಯಮ ಪ್ರಶಸ್ತಿಗೆ ವಿನುತಾ ಹೆಗಡೆ ಆಯ್ಕೆ