ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಕೋನಳ್ಳಿಯ ವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್‌ರ ಚಾತುರ್ಮಾಸ್ಯ ಕಾರ್ಯಕ್ರಮದ ನಾಲ್ಕನೇ ದಿನವಾದ ಭಾನುವಾರ ಬಾಡ ಗ್ರಾಮದ ಕೂಟದಿಂದ ಗುರು ಸೇವಾ ಕಾರ್ಯ ನಡೆಯಿತು.

ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಬಾಡ, ಗುಡೇಅಂಗಡಿ ಭಾಗದ ನಾಮಧಾರಿ ಸಮಾಜದ ಭಾಂಧವರು ಗುರು ಸೇವಾ ಕಾರ್ಯವನ್ನು ಗೈದರು. ಸರದಿಯಲ್ಲಿ ಹೊರೆಗಾಣಿಕೆ ಸಂದ ಭಕ್ತರು ಅಕ್ಕಿಮೂಟೆ, ತರಕಾರಿ, ಹಣ್ಣು ಸೇರಿದಂತೆ ಧವಸಧಾನ್ಯಗಳ ಮೂಟೆಯನ್ನು ಹೊತ್ತುಕೊಂಡು ಬಂದು ಶ್ರೀ ಗುರು ಪಾದಕ್ಕೆ ಅರ್ಪಿಸಿದರು.ವಿವಿಧ ಸೇವಾ ಕಾರ್ಯಗಳಲ್ಲಿ ನಿಯೋಜನೆಗೊಂಡ ಬಾಡ ಕೂಟದ ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೂ ಎಲ್ಲಾ ರೀತಿಯ ಸೇವಾ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು. ಶ್ರೀ ಕಾಂಚಿಕಾಂಬಾ ಭಜನಾ ಮಂಡಳಿಯು ಭಕ್ತಿಸುಧೆಯನ್ನು ಹರಿಸುವ ಮೂಲಕ ಗುರು ಭಕ್ತರನ್ನು ಮಂತ್ರಮುಗ್ದಗೊಳಿಸಿತು. ಬಳಿಕ ಗುರು ಪಾದ ಪೂಜೆಯನ್ನು ಬಾಡ ಗ್ರಾಮದ ಪ್ರಮುಖರು ನೆರವೇರಿಸಿದರು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ರತ್ನಾಕರ ನಾಯ್ಕರು ಶ್ರೀಗಳ ಬಳಿಯೇ ನಿಂತು ತಮ್ಮೂರಿನ ಭಕ್ತರಿಂದ ಕೈಗೊಳ್ಳಲಾದ ಗುರು ಸೇವೆಗೆ ಮಾರ್ಗದರ್ಶನ ಮಾಡಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಧರ್ಮ ಕಾರ್ಯದಲ್ಲಿ ಸುಖವಿದೆ. ಪಂಚೇಂದ್ರೀಯದಿಂದ ಬರುವ ಸುಖಗಳು ತಾತ್ಕಾಲಿಕ ಸುಖಗಳು. ಧರ್ಮದ ಅಂತರಾಳದಿಂದ ಬರುವ ಸುಖಗಳು ಶಾಶ್ವತ ಸುಖಗಳು ಎಂದು ಋಷಿಮುನಿಗಳು ಹೇಳಿದ್ದಾರೆ. ಮುನುಷ್ಯನಿಗೆ ದೇವ ಋಣ , ಪಿತೃ ಋಣ, ಋಷಿ ಋಣ, ಭೂತ ಋಣ ಇದೆ. ಈ ಋಣಗಳಿಂದ ಮುಕ್ತರಾಗಿ ಭಗವಂತನ ಸಾನಿಧ್ಯ ಪಡೆಯಲು ಧರ್ಮ ಕಾರ್ಯ ಮಾಡಬೇಕು. ಭಾರತೀಯ ಪರಂಪರೆಯಾದ ಕಾಯ, ಮನಸ್ಸಾ ವಾಚಾ ಕರ್ತವ್ಯವನ್ನು ಕೈಗೊಂಡು ಜೀವನ ಚಕ್ರದಿಂದ ಮುಕ್ತರಾಗಬೇಕು ಎಂದು ನುಡಿದರು.

ಶ್ರೀಗಳ ಆಶೀರ್ವಚನದ ಬಳಿಕ ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿದ ಗುರುಗಳು ಎಲ್ಲರಿಗೂ ಹರಸಿದರು. ಈ ಸಂದರ್ಭದಲ್ಲಿ ಬಾಡದ ಪ್ರಮುಖರಾದ ರತ್ನಾಕರ ನಾಯ್ಕ, ಪ್ರಕಾಶ ನಾಯ್ಕ, ಜನಾರ್ಧನ ನಾಯ್ಕ, ಜಗನ್ನಾಥ ನಾಯ್ಕ, ಬಾಬು ನಾಯ್ಕ, ಈಶ್ವರ ನಾಯ್ಕ ಮಾಸ್ತರ್, ನಾಗರಾಜ ನಾಯ್ಕ, ವಸಂತ ನಾಯ್ಕ, ಗಣೇಶ ನಾಯ್ಕ, ಮಾರುತಿ ನಾಯ್ಕ, ವಿದ್ಯಾಧೀಶ ನಾಯ್ಕ, ಮಂಜುನಾಥ ನಾಯ್ಕ, ಸಂದೀಪ ನಾಯ್ಕ, ಕೇಶವ ನಾಯ್ಕ, ಇತರರು ಇದ್ದರು.ಜೊತೆಗೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಆರ್ ನಾಯ್ಕ, ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷ ಎಚ್ ಆರ್ ನಾಯ್ಕ ಕೋನಳ್ಳಿ ಇದ್ದರು. ಬಳಿಕ ಪ್ರಸಾದ ಭೋಜನ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಯಕ್ಷಗಾನ ಪ್ರದರ್ಶನ ನಡೆಯಿತು.

ಇದನ್ನೂ ಓದಿ:- ರಸ್ತೆಯಲ್ಲಿ ಬಾಲಕನಿಗೆ ಕತ್ತಿ ತೋರಿಸಿ ಹಲ್ಲೆಗೆ ಯತ್ನ : ವಿಡಿಯೋ ವೈರಲ್