ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಎಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಬಡವರು ಮತ್ತು ಶ್ರೀಮಂತರೆಂದು ಬೇಧ ಮಾಡದೆ, ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರು ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆಯ ಮೂರನೇ ದಿನದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಬಡವರನ್ನು ಪ್ರೀತಿಯಿಂದ ಕಾಣುವುದರಿಂದ ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆ ಬೆಳೆಯುತ್ತದೆ. ಇದರಿಂದ ಸಮಾಜದ ಪ್ರಗತಿ ಸಾಧ್ಯ. ಬಡವರು, ಶಕ್ತಿ ಇಲ್ಲದವರು ನಮ್ಮ ಬಳಿ ಬಂದಾಗ ಅವರ ಕಣ್ಣೊರೆಸುವ, ಅವರಿಗೆ ಪ್ರೀತಿ ಕೊಡುವ ಮೂಲಕ ಅವರಿಗೆ ಸಹಕರಿಸುವ ಗುಣ ಕಲಿತುಕೊಳ್ಳಬೇಕು. ಮನುಷ್ಯ ಜನ್ಮ ದೊಡ್ಡದು. ಹೀಗಾಗಿ ನಾವು ಎಲ್ಲಿಯೂ ಮೇಲು ಕೀಳೆನ್ನುವ ಜಾತಿಭೇದ ಮಾಡದೇ ಸಮಾನರಾಗಿ ಸಾಗುವ ಮೂಲಕ ಇಂತಹ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿ ಶ್ರೇಷ್ಠತೆಯನ್ನು ಪಡೆಯೋಣ ಎಂದರು.

ನವಿಲಗೋಣ ಹಾಗೂ ಹಳದೀಪುರ ಗ್ರಾ.ಪಂ ವ್ಯಾಪ್ತಿಯ ಸಮಾಜಬಾಂಧವರು ಶ್ರೀಗಳ ಪಾದಪೂಜೆ, ಗುರು ಸೇವೆಗೈದರು. ೧೧ ಪಾದಪೂಜೆ, ೨೦ ಗುರುಸೇವೆ ಭಕ್ತಿಪೂರ್ವಕವಾಗಿ ನಡೆಯಿತು. ಕೂಜಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸರ್ವ ಭಕ್ತರಿಗೂ ಸಿಹಿ ವಿತರಣೆ ನಡೆಯಿತು. ನವಿಲಗೋಣ ಹಾಗೂ ಹಳದೀಪುರ ವ್ಯಾಪ್ತಿಯ ಪ್ರಮುಖರಾದ ಆರ್.ಎಂ.ನಾಯ್ಕ ನವೀಲಗೋಣ, ಅಜೀತ ನಾಯ್ಕ, ವಾಸು ನಾಯ್ಕ, ಹಿರಿಯರಾದ ಗೋಪಾಲ ಹುಲಿಯಾ ನಾಯ್ಕ, ಮಾದೇವಿ ಸುರೇಶ ನಾಯ್ಕ, ಎಂ.ಎಂ.ನಾಯ್ಕ, ಎಂ.ಡಿ ನಾಯ್ಕ ಸೇರಿದಂತೆ ಅನೇಕರು ಸೇರಿದಂತೆ ಇತರೆ ಮುಖಂಡರ ನೇತೃತ್ವದಲ್ಲಿ ಗುರುಗಳಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಹಳದೀಪುರ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಮಹೇಶ ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ನಾಯ್ಕ ಸೇರಿದಂತೆ ಅನೇಕರು ಗುರುಗಳ ಆಶೀರ್ವಾದ ಪಡೆದು ಫಲಮಂತ್ರಾಕ್ಷತೆ ಸ್ವೀಕರಿಸಿದರು.

ಇದನ್ನೂ ಓದಿ :ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ