ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮದ ವ್ಯಕ್ತಿಯೊಬ್ಬನ ಮೊಬೈಲ್ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿನ ಚಿತ್ರ-ವಿಚಿತ್ರ ವಿಡಿಯೋ ಕಂಡು ಪೊಲೀಸರೇ ಬೆರಗಾದ ಘಟನೆ ಕುತೂಹಲ ಸೃಷ್ಟಿಸಿದೆ.
ಮೂರು ದಿನದ ಹಿಂದೆ ಕುಮಟಾ ತಾಲೂಕಿನ ಹೊಲನಗದ್ದೆಯ ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆಮಾಡಿ, “ನಮ್ಮ ಮನೆಗೆ ಯಾರೋ ದರೋಡೆಕೋರರು ನುಗ್ಗಿ, ನಮ್ಮ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಾವು ಅದನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದೇವೆ” ಎಂದು ತಿಳಿಸಿದ್ದಾನೆ. ವ್ಯಕ್ತಿ ಕರೆ ಮಾಡಿದ ಸ್ಥಳಕ್ಕೆ 112 ಪೊಲೀಸ್ ವಾಹನ ಧಾವಿಸಿದೆ. ಆದರೆ ಘಟನೆ ಆಗಿದೆ ಎಂದು ತಿಳಿಸಲಾದ ಸ್ಥಳದಲ್ಲಿ ಯಾವುದೇ ದರೋಡೆ ಅಥವಾ ಖಾರದ ಪುಡಿ ಎರಚಿದ ಕುರುಹು ಕಂಡು ಬಂದಿಲ್ಲ. ಅನುಮಾನಗೊಂಡ 112 ಪೊಲೀಸರು ಆ ವ್ಯಕ್ತಿಗೆ ಠಾಣೆಗೆ ತೆರಳಿ ದೂರು ನೀಡಲು ಸೂಚಿಸಿದ್ದಾರೆ.
ನಂತರ ಹೊಲನಗದ್ದೆಯ ಇಬ್ಬರು ವ್ಯಕ್ತಿಗಳು ಕುಮಟಾ ಪೊಲೀಸ್ ಠಾಣೆಗೆ ಬಂದಿದ್ದು, ಪೊಲೀಸರು ಅವರ ಕಥೆಗಳನ್ನು ಆಲಿಸಿ, ನಿಮ್ಮ ಮೊಬೈಲಿನಲ್ಲಿ ಸೆರೆ ಹಿಡಿದ ವಿಡಿಯೋ ತೋರಿಸಿ ಎಂದು ಗಟ್ಟಿ ದನಿಯಲ್ಲಿ ಹೇಳಿದ್ದಾರೆ. ಠಾಣೆಗೆ ಬಂದ ಇಬ್ಬರಲ್ಲಿ ಒಬ್ಬ ತನ್ನ ಮೊಬೈಲಿನ ಪಾಸ್ವರ್ಡ್ ತೆಗೆದು ಪೊಲೀಸರಿಗೆ ನೀಡಿದ್ದಾನೆ. ಆದರೆ ಇನ್ನೊಬ್ಬ ನನ್ನ ಮೊಬೈಲಿನ ಪಾಸ್ವರ್ಡ್ ಮರೆತು ಹೋಗಿದೆ ಎಂದು ಹೇಳಿದ್ದಾನೆ. ಪೊಲೀಸರು ಅನುಮಾನಗೊಂಡು ಆಚೆ ಹೋಗಿ ಬರುವಷ್ಟರಲ್ಲಿ ಠಾಣೆಗೆ ಬಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಆಶ್ಚರ್ಯಗೊಂಡ ಪೊಲೀಸರು ತಕ್ಷಣ ತಮ್ಮಲ್ಲಿದ್ದ ಅನುಮಾನಾಸ್ಪದ ವ್ಯಕ್ತಿಯ ಮೊಬೈಲಿನಲ್ಲಿನ ವಿಡಿಯೋ ಪರಿಶೀಲಿಸಿದ್ದು, ಅದರಲ್ಲಿನ ಚಿತ್ರ-ವಿಚಿತ್ರ ವಿಡಿಯೋ ಕಂಡು ಬೆರಗಾಗಿದ್ದಾರೆ.
ಅವರ ಮೊಬೈಲಿನಲ್ಲಿದ್ದ ಒಂದು ವಿಡಿಯೋದಲ್ಲಿ ಒಂದು ವಿಚಿತ್ರ ದುರ್ಬಿನ್ ಕಂಡಿದ್ದು, ಅದರಲ್ಲಿ ಗೋಡೆಯಾಚೆಗಿನ ದೃಶ್ಯಗಳನ್ನು ಸಲೀಸಾಗಿ ನೋಡಬಹುದಾಗಿದೆ! ಮತ್ತೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಂದ್ರಲೋಕಕ್ಕೆ ಹೋಗುವಂತಹ ಒಂದು ವಿಚಿತ್ರ ಕೋಟ್ ಧರಿಸಿದ್ದು, ಯಾವುದೋ ಟಾರ್ಚ್ ರೀತಿಯ ವಸ್ತುವಿನಿಂದ ಲೈಟ್ ಬಿಡುತ್ತಾ ಯಾವುದೋ ಪ್ರಯೋಗ ಮಾಡುತ್ತಿರುವ ಹಾಗೆ ಕಾಣಿಸಿದೆ. ಈ ವಿಡಿಯೋಗಳು ವಿಚಿತ್ರವಾದರೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇವರು ಮಾಟ-ಮಂತ್ರ ಮಾಡುವವರಾ? ಇವರು ಗ್ರಾಮೀಣ ಭಾಗದ (ಬ್ಲ್ಯಾಕ್ ಮ್ಯಾಜಿಕ್) ನೋಟಗಾರರಾ? ಇವರು ಹಳ್ಳಿ ಕಡೆಯಾ ತಾಂತ್ರಿಕರಾ? ಇವರು ತಮ್ಮ ವಿಡಿಯೋಗಳನ್ನು ತಾವೇ ಯಾಕೆ ಮಾಡಿಕೊಂಡರು? ಮುಂತಾದ ಪ್ರಶ್ನೆಗಳು ವಿಡಿಯೋ ನೋಡಿದ ನಂತರ ತಂತಾನೇ ಹುಟ್ಟುತ್ತವೆ. ಯಾವುದಕ್ಕೂ ಕುಮಟಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಒಂದು ಬೇರೆ ಲೋಕವೇ ತೆರೆದುಕೊಳ್ಳಲಿದೆ ಎನ್ನುವುದು ನಮ್ಮ ಅನುಮಾನ.
ಇದನ್ನೂ ಓದಿ