ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ,ಛತ್ತೀಸ್‌ಗಢ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ,ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಮಾಜಿ ಅಧ್ಯಕ್ಷರು, ಕರ್ನಾಟಕ ಕಾನೂನು ಆಯೋಗದ ಮಾಜಿ ಅಧ್ಯಕ್ಷರು ಹಾಗೂ “ನಾಡೋಜ” ಗೌರವಕ್ಕೆ ಭಾಜನರಾಗಿದ್ದ ಎಸ್.ಆರ್. ನಾಯಕ್ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರಿಗೆ (80) ವರ್ಷವಾಗಿದ್ದು ವಯೋ ಸಹಜ ಖಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಮೃತರು ಪತ್ನಿ ಶಾಲಿನಿ ಎಸ್. ನಾಯಕ್, ಪುತ್ರ ಡಾ. ಎನ್.ಎಸ್. ನಾಯಕ್, ಪುತ್ರಿ ನಿಶಾ ಗಾಂವ್ಕರ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ನಾಳೆ ಮೇ 19ರಂದು ಸಂಜೆ 4 ಗಂಟೆಗೆ ಹೆಬ್ಬಾಳದ್ಲಿ ತ್ಯಕ್ರಿಯೆ ನೆರವೇರಲಿದೆ. “ಆಡಳಿತ ಸಾಗಿಸಿರುವ ಡಾಲರ್ಸ್ ಕಾಲೊನಿ, ಹಂತ-2, ಆರ್‌ಎಂವಿ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ,” ಎಂದು ಪುತ್ರ ಡಾ. ರಾಹುಲ್ ಮಾಹಿತಿ ನೀಡಿದ್ದಾರೆ.
ಪರಿಚಯ: ಎಸ್.ಆರ್. ನಾಯಕ್ ಅವರು 1945ರ ಜನವರಿ 1ರಂದು ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿ ಗ್ರಾಮದಲ್ಲಿ ಕೃಷಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಹಾಗೂ ಎಲ್‌ಎಲ್.ಎಂ ಪದವಿಯನ್ನು ಪಡೆದುಕೊಂಡ ನಾಯಕ್ ಅವರು ತಮ್ಮ ವಿದ್ಯಾಭ್ಯಾಸದ ಎಲ್ಲಾ ಹಂತಗಳಲ್ಲಿ ಶ್ರೇಣಿಯಲ್ಲಿ ಉತ್ತೀರ್ಣರಾದವರು. 1974ರಲ್ಲಿ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿತರಾಗಿ, ಮೊದಲು ಎಂ.ಗೋಪಾಲಕೃಷ್ಣ ಶೆಟ್ಟಿ ಹಾಗೂ ನಂತರ ಎಲ್.ಜಿ. ಹವನೂರು ಅವರ ಸಹಾಯ ವಕೀಲರಾಗಿ ಅಭ್ಯಾಸ ಆರಂಭಿಸಿದರು. ಕೆಲ ಕಾಲ ಬೆಂಗಳೂರು ಬಿಎಂಎಸ್ ಹಾಗೂ ಎಸ್‌ಎಲ್‌ಎಸ್‌ಆರ್‌ಸಿ ಹವನೂರು ಕಾನೂನು ಕಾಲೇಜುಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಅವರು 1994ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದು, ನಂತರ ಆಂಧ್ರ ಪ್ರದೇಶ ಹೈಕೋರ್ಟ್‌ಗೆ ವರ್ಗಾಯಿಸಲ್ಪಟ್ಟರು. ಅಲ್ಲಿ ಅವರು ಆಂಧ್ರ ಪ್ರದೇಶ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಛತ್ತೀಸ್‌ಗಢ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾದರು.
“ಬಡವರು, ದಲಿತರು, ಹಿಂದುಳಿದ ಸಮುದಾಯಗಳ ಧ್ವನಿಯಾಗಿದ್ದ ನಾಯಕ್ ಅವರು ನಗರ ಸಿವಿಲ್ ನ್ಯಾಯಾಲಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು,” ಎಂದು ಪ್ರಧಾನ ನ್ಯಾಯವಾದಿ ಕೆ. ಶಶಿಕಿರಣ ಶೆಟ್ಟಿ, ಬೆಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಾಗೂ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಅವರು ಶೋಕಸಂತಾಪ ಸೂಚಿಸಿದರು.
ಸಿಎಂ ಸಿದ್ದರಾಮಯ್ಯ ಸಂತಾಪ
ಛತ್ತೀಸ್‌ಘಡ ಹೈಕೋರ್ಟಿನ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಎಸ್.ಆರ್.ನಾಯಕ್ ಅವರ ನಿಧನದಿಂದ ದುಃಖಿತನಾಗಿದ್ದೇನೆ.
ನನಗೆ ಆತ್ಮೀಯರಾಗಿದ್ದ ನ್ಯಾಯಮೂರ್ತಿ ನಾಯಕ್ ಪ್ರತಿಭಾವಂತ ಕಾನೂನು ಶಾಸ್ತ್ರಜ್ಞರಾಗಿದ್ದರು.ಅವರು ಕರ್ನಾಟಕ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ದುಃಖದಲ್ಲಿರುವ ಅವರ ಕುಟುಂಬ ವರ್ಗಕ್ಕೆ ನನ್ನ ಸಾಂತ್ವನಗಳು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಸಿಎಂ ಸಿದ್ದರಾಮಯ್ಯ, @siddaramaiah.
ಇದನ್ನೂ ಓದಿ
- 30 ವರ್ಷದ ಬಿಲ್ ಬಾಕಿ : ಜಿಲ್ಲಾಧಿಕಾರಿ ಕಾರ ಜಪ್ತಿ
- ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು – ಮಿರ್ಜಾನ ಸಮೀಪ ದಾರುಣ ಘಟನೆ
- ಮಾಜಿ ಸಂಸದ ಅನಂತಕುಮಾರ ಹೆಗಡೆಗೆ ಮತ್ತೆ ಜೀವ ಬೆದರಿಕೆ
- ದಿನಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ : ಪತ್ರಕರ್ತ ಪ್ರಮೋದ ಹರಿಕಾಂತ