ಸುದ್ದಿಬಿಂದು ಬ್ಯುರೋ ವರದಿ
ಕುಮಟಾ : ಇದೇ ಬರುವ ಮೇ 3, ಶನಿವಾರದಂದು ಕುಮಟಾಕ್ಕೆ ರಾಜ್ಯ ಸರ್ಕಾರದ ಸಚಿವದ್ವಯರು ಆಗಮಿಸಲಿದ್ದು, ಅಂದು ಒಂದೇ ವೇದಿಕೆಯಲ್ಲಿ ವಿವಿಧ ಪಕ್ಷದ ರಾಜಕಾರಣಿಗಳ ಸಮಾಗಮವಾಗಲಿದೆ.
ಮೇ 3ರಂದು ಬೆಳಿಗ್ಗೆ 10.30 ಘಂಟೆಗೆ ಕುಮಟಾ ಬಗ್ಗೋಣ ರಸ್ತೆಯಲ್ಲಿರುವ ನಾಮಧಾರಿ ಸಭಾಭವನದ ಮೇಲ್ಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಸಮಾರಂಭಕ್ಕೆ ರಾಜ್ಯದ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಅನೇಕ ರಾಜಕಾರಣಿಗಳು, ಗಣ್ಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮ ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ, 1008 ಮಹಾಮಂಡಲೇಶ್ವರ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ಕುಮಟಾ ಪಟ್ಟಣದ ಪ್ರತಿಷ್ಟಿತ ನಾಮಧಾರಿ ಸಭಾಭವನ 29/12/2004ರಂದು ಉದ್ಘಾಟನೆಗೊಂಡಿತ್ತು. ಈ ಕಟ್ಟಡವನ್ನು ಅಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಉದ್ಘಾಟಿಸಿದ್ದರು. ಆ ಸಂದರ್ಭ ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ನೀಡಿದ್ದರು. 21 ವರ್ಷದ ಬಳಿಕ ಈಗ ಅದೇ ನಾಮಧಾರಿ ಸಭಾಭವನದ ಮೇಲ್ಮಹಡಿ ಕಟ್ಟಡದ ಉದ್ಘಾಟನೆಗೆ ಬಂಗಾರಪ್ಪ ಅವರ ಮಗ ಹಾಗೂ ರಾಜ್ಯದ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ. ಹಾಗೆಯೇ ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಹಾಲಿ ಪೀಠಾಧೀಶರ ದಿವ್ಯ ಉಪಸ್ಥಿತಿ ಇರಲಿದೆ.
ರಾಜ್ಯದ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ನಾಮಧಾರಿ ಸಭಾಭವನದ ಮೇಲ್ಮಹಡಿ ಕಟ್ಟಡ ಉದ್ಘಾಟಿಸಲಿದ್ದಾರೆ. ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಇನ್ನೂ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಾಮಧಾರಿ ಸಭಾಭವನದ ಮೇಲ್ಮಹಡಿ ಕಟ್ಟಡಕ್ಕೆ ಸರ್ಕಾರದ ಅನುದಾನ ಮಂಜೂರಿ ಆದಾಗ ಕೋಟಾ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯ ಹಾಲಿ ಸಂಸದ ಕಾಗೇರಿ ಅವರು ಸಂಸತ್ ಚುನಾವಣೆ ಪೂರ್ವದಲ್ಲಿ ನಾಮಧಾರಿ ಸಭಾಭವನಕ್ಕೆ ಬಂದು ಮತ ಯಾಚಿಸಿದ್ದರು. ಅವರು ಸಂಸದರಾಗಿ ಆಯ್ಕೆ ಆದ ನಂತರ ಇದೇ ಮೊದಲ ಬಾರಿಗೆ ನಾಮಧಾರಿ ಸಭಾಭವನಕ್ಕೆ ಆಗಮಿಸಲಿದ್ದಾರೆ. ದೇಶಾದ್ಯಂತ ಓಡಾಡಿ ಪಕ್ಷವನ್ನು ಕಟ್ಟಿರುವ ಕಾಂಗ್ರೆಸ್ ಕಟ್ಟಾಳು ಬಿ. ಕೆ. ಹರಿಪ್ರಸಾದ ಅವರು ವಿಧಾನ ಪರಿಷತ್ ಸದಸ್ಯರಾದ ನಂತರ ಇದೇ ಮೊದಲ ಬಾರಿಗೆ ಕುಮಟಾ ನಾಮಧಾರಿ ಸಭಾಭವನಕ್ಕೆ ಆಗಮಿಸಲಿದ್ದಾರೆ.
ಇದೇ ದಿನ ಸಭಾಭವನದ ಆವರಣದಲ್ಲಿ ಶ್ರೀ ವೆಂಕಟರಮಣ, ಶ್ರೀದೇವಿ ಮತ್ತು ಭೂದೇವಿ ದೇವರ ವಾರ್ಷಿಕ ವರ್ಧಂತಿ ಹಾಗೂ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಸಹಿತ ದೇವರ ಪಲ್ಲಕ್ಕಿ ಮೆರವಣಿಗೆ ಕೂಡ ನಡೆಯಲಿದೆ. ಒಟ್ಟಾರೆ ಇದು ಕುಮಟಾ ನಾಮಧಾರಿ ಸಭಾಭವನದ ಮೇಲ್ಮಹಡಿ ಕಟ್ಟಡ ಉದ್ಘಾಟನಾ ಸಮಾರಂಭ ಮತ್ತು ಧಾರ್ಮಿಕ ಕಾರ್ಯಕ್ರಮವಾದರೂ ಈ ಸಭೆಯಲ್ಲಿ ಅನೇಕ ರಾಜಕಾರಣಿಗಳ ಸಮಾಗಮ ಆಗುವುದರ ಜೊತೆಗೆ ಇದೊಂದು ಐತಿಹಾಸಕ ಕಾರ್ಯಕ್ರಮವಾಗಲಿದೆ.
ಇದನ್ನೂ ಓದಿ