ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ:ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಲು ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ಕಳೆದ ಕೆಲ ದಿನಗಳಿಂದ ನಗರದ ಐಪಿಎಂ, ಹಳೆದಾಂಡೇಲಿ ಕೋಗಿಲಬನ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಜಿಓಎಸ್ ನ್ನು ಕಳವು ಮಾಡಲಾಗಿತ್ತು. ಪ್ರತಿನಿತ್ಯ ಒಂದಲ್ಲ ಒಂದು ಕಡೆಗಳಲ್ಲಿ ವಿದ್ಯುತ್ ಕಂಬದ ಜಿಓಎಸ್ ನ್ನು ಕಳವು ಮಾಡಲಾಗುತ್ತಿತ್ತು. ಈ ಕೃತ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿಗಳು ಒಂದು ತಂಡವನ್ನು ರಚಿಸಿ ಕಳವಾಗಿರುವ ವಿದ್ಯುತ್ ಕಂಬದ ಜಿಓಎಸ್ ಗಳನ್ನು ಹುಡುಕುವ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಪಟೇಲ್ ವೃತ್ತದ ಹತ್ತಿರ ಇರುವ ಸ್ಕ್ರಾಪ್ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಜಿಓಎಸ್ ಗಳಿಗೆ ಸಂಬಂಧಿಸಿದ ಕೆಲವು ಕಬ್ಬಿಣದ ಸಾಮಗ್ರಿಗಳು ದೊರತಿವೆ.
ಅಂಗಡಿ ಆತನಲ್ಲಿ ಇದು ಎಲ್ಲಿಂದ ಯಾರಿಂದ ಬಂತು ಎನ್ನುವ ಮಾಹಿತಿಯನ್ನು ಕಲೆ ಹಾಕಿ, ಸ್ಕ್ರಾಪ್ ಅಂಗಡಿಯವನೇ ಜಿಓಎಸ್ ಕಳವು ಮಾಡಿದಾತನ ಮನೆಯನ್ನು ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಪೊಲೀಸರಿಗೆ ತೋರಿಸಿಕೊಟ್ಟಿದ್ದಾನೆ.ಕಳವು ಮಾಡಿರುವ ಆರೋಪಿ ದಾಂಡೇಲಿ ನಗರದ ಬೈಲುಪಾರು ನಿವಾಸಿ ವಿಲ್ಸನ್ ಎಂಬಾತನಾಗಿದ್ದು, ಇವನ ಮನೆಯನ್ನು ಪರಿಶೀಲನೆ ನಡೆಸಿದಾಗ, ಈತನ ಮನೆಯಲ್ಲಿಯೂ ವಿದ್ಯುತ್ ಕಂಬದ ಜಿಓಎಸ್ ಸಾಮಗ್ರಿಗಳು ದೊರೆತಿವೆ.
ಪಿಎಸ್ಐ ಕಿರಣ್ ಪಾಟೀಲ್ ಅವರ ನೇತೃತ್ವದಲ್ಲಿ ನಗರ ಠಾಣೆಯ ಪೊಲೀಸರು ಕಳವು ಮಾಡಿರುವ ವಸ್ತುಗಳನ್ನು ವಶಪಡಿಸಿಕೊಂಡು, ಕಳವು ಮಾಡಿದ ಆರೋಪಿಯನ್ನು ಮತ್ತು ಕಳವು ಮಾಡಿದ ವಸ್ತುಗಳನ್ನು ಖರೀದಿಸಿದ ಸ್ಕ್ರ್ಯಾಪ್ ಅಂಗಡಿಯಾತನನ್ನು ವಶಕ್ಕೆ ಪಡೆದು ಮುಂದಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ, ಶಾಖಾಧಿಕಾರಿ ಉದಯ ಹಾಗೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಮನಿಸಿ.