ಪಾಟ್ನಾ :ವಿವಾಹಿತ ಮಹಿಳೆ ಓರ್ವಳು ಹಳೆ‌ ಲವರ್ ಬಳಿ ಹೋಗಲು ಅಡ್ಡಿಯಾಗಿದ್ದ ತಾನೆ ಹೆತ್ತ ಮೂರು ವರ್ಷದ ಮಗುವಿನ ಕತ್ತು ಸೀಳಿ ಕೊಲೆಗೈದು ಕೆಂಪು ಸೂಟ್‌ಕೇಸ್ ನಲ್ಲಿ ತುಂಬಿ ಎಸೆದು ಹೋಗಿರುವ ಘಟನೆ ‌ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಾಜಲ್‍ ಎಂಬಾಕೆಯೆ ಹೆತ್ತ ಮಗುವನ್ನ ಕೊಂದ ಪಾಪಿ ತಾಯಿಯಾಗಿದ್ದಾಳೆ. ಹತ್ಯೆಗೈದ ಈ ಕ್ರೂರಿಯನ್ನ ಪೊಲೀಸರು ಬಂಧಿಸಿದ್ದಾರೆ. ಈಕೆಗೆ ವಿವಾಹ ಪೂರ್ವದಲ್ಲಿ ಬೇರೊಂದು ಯುವಕನ ಜೊತೆ ಸಂಬಂಧವಿತ್ತು. ವಿವಾಹ ನಂತರದಲ್ಲೂ ಸಹ ಈ ಕಳ್ಳ‌ ಸಂಬಂಧ ಹಾಗೆ ಮುಂದುವರೆದಿತ್ತು ಎನ್ನಲಾಗಿದೆ. ಆತನ ಬಳಿ ಹೋಗಲು ಮನೆಯಲ್ಲಿರುವ ಮೂರು ವರ್ಷದ ಹೆತ್ತ ಮಗಳು ಅಡ್ಡಿಯಾಗಿದ್ದಳು.

ಪ್ರಿಯಕರನೊಂದಿಗೆ ತೆರಳಲು ಕೃತ್ಯ ಎಸಗಿದ್ದಾಗಿ ಪೊಲೀಸ್ ತನಿಖೆಯ ವೇಳೆ ಮಹಿಳೆ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರನಿಗೆ ಮಗಳು ಬರಲು ಇಷ್ಟವಿರಲಿಲ್ಲ. ಹೀಗಾಗಿ ಮಗುವನ್ನು ಕೊಲೆಗೈದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮುಜಾಫರ್‍ಪುರದ ಮಿನಾಪುರದ ವಸತಿ ಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಮೃತದೇಹ ಕೆಂಪು ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿತ್ತು.

ಮಗುವಿನ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಬಳಿಕ ಪೊಲೀಸರು ತನಿಖೆ ಕೈಗೊಂಡಾಗ ಮಗುವಿನ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು. ಆರೋಪಿ ಕಾಜಲ್‍ನ ಪತಿ ಮನೋಜ್ ನೀಡಿದ ದೂರಿನ ಮೇಲೆ ಪೊಲೀಸರು ಮಹಿಳೆಯ ಫೋನ್ ಟ್ರ್ಯಾಕ್ ಮಾಡಿದಾಗ, ಆಕೆ ತನ್ನ ಪ್ರಿಯಕರನ ಮನೆಯಲ್ಲಿರುವುದು ಪತ್ತೆಯಾಗಿತ್ತು.ಬಳಿಕ ಅಲ್ಲಿಂದ ಪೊಲೀಸರು ಆಕೆಯನ್ನು ಬಂಧಿಸಿ ಕರೆತಂದಿದ್ದಾರೆ.

ಇದನ್ನೂ ಓದಿ